Ballari | ಎಸ್‌ಐಆರ್ ಕುರಿತು ಮನೆಮನೆಗೆ ಜಾಗೃತಿ ಮೂಡಿಸಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಸದ ತುಕಾರಾಂ ಕರೆ
ಸಿರುಗುಪ್ಪ/ಬಳ್ಳಾರಿ : ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಿ, ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡದಂತೆ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಮಾಹಿತಿ ನೀಡಬೇಕು ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ. ತುಕಾರಾಂ ಕರೆ ನೀಡಿದರು.
ನಗರದ ಅಭಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಎಸ್‌ಐಆರ್ ಜನಜಾಗೃತಿ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮತದಾರರ ಹಕ್ಕುಗಳ ರಕ್ಷಣೆ ಮತ್ತು ಮತದಾರರ ಪಟ್ಟಿಯ ಪಾರದರ್ಶಕತೆಗೆ ಎಸ್‌ಐಆರ್ ಪ್ರಕ್ರಿಯೆ ಮಹತ್ವದ್ದಾಗಿದೆ. ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಕಾರ್ಯಕರ್ತರು ಪ್ರೇರೇಪಿಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್.ಪಿ. ಸುಧಾಮ್ ದಾಸ್ ಮಾತನಾಡಿ, ಪ್ರಜಾಪ್ರಭುತ್ವದ ಬಲವೇ ಮತದಾರರು. ಎಸ್‌ಐಆರ್ ಕುರಿತು ಜನರಿಗೆ ಸಮರ್ಪಕ ಮಾಹಿತಿ ತಲುಪಿಸಿ, ಮತದಾರರ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.
ಮಾಜಿ ಶಾಸಕ ಟಿ.ಎಂ. ಚಂದ್ರಯ್ಯ ಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್. ಸ್ವಾಮಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ ಅವರು ಕಾರ್ಯಕರ್ತರಿಗೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಕರಿಬಸಪ್ಪ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಮಾರುತಿ ರೆಡ್ಡಿ, ವರ ಪ್ರಸಾದ್, ಮುಖಂಡರಾದ ಮಲ್ಲಿಕಾರ್ಜುನ ಬಾಲಪ್ಪ, ಸಿದ್ದರಾಮಯ್ಯ ಸ್ವಾಮಿ, ಸೋಮಪ್ಪ ದಮ್ಮೂರು, ನರೇಂದ್ರ ಸಿಂಹ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.