Ballari | ಪಟ್ಟಣದಲ್ಲಿ ವಿವಿಧ ಅಂಗಡಿಗಳ ಮೇಲೆ ಟಾಸ್ಕ್ ಫೋರ್ಸ್ ತಂಡದಿಂದ ದಾಳಿ
20ಕ್ಕೂ ಹೆಚ್ಚು ಅಂಗಡಿಗಳ ಪರಿಶೀಲನೆ; ಜಾಗೃತಿ ಕರಪತ್ರ ವಿತರಣೆ
ಬಳ್ಳಾರಿ/ಕಂಪ್ಲಿ : ಪಟ್ಟಣದ ವಿವಿಧ ಅಂಗಡಿ-ಉದ್ದಿಮೆಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಹಾಗೂ ತಾಲೂಕು ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳು ದಾಳಿ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಬಳಿಕ ಅಧಿಕಾರಿಗಳ ತಂಡ ಮಂಗಳವಾರ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಕಾರ್ಮಿಕ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಡಿ. ಮೌನೇಶ ಮಾತನಾಡಿ, ಬಾಲ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಕಾನೂನುಬಾಹಿರ. ಈ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆಗೊಳಿಸುವ ಉದ್ದೇಶದಿಂದ ಇಂತಹ ದಾಳಿಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ದಾಳಿಯ ವೇಳೆ ಪತ್ತೆಯಾದ ಬಾಲ ಕಾರ್ಮಿಕ ಮಕ್ಕಳ ಶಿಕ್ಷಣದ ಕುರಿತು ಪರಿಶೀಲನೆ ನಡೆಸಿ, ಅವರು ಶಾಲೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಬಳಿಕ ಅಧಿಕಾರಿಗಳ ತಂಡ ಪಟ್ಟಣದ 20ಕ್ಕೂ ಹೆಚ್ಚು ಅಂಗಡಿಗಳು ಹಾಗೂ ವಾರದ ಸಂತೆ ಮಾರುಕಟ್ಟೆಗೆ ಭೇಟಿ ನೀಡಿ, ಬಾಲ ಕಾರ್ಮಿಕ ಪದ್ಧತಿ ತಡೆಗೆ ಸಂಬಂಧಿಸಿದ ಕರಪತ್ರಗಳನ್ನು ವಿತರಿಸಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.
ಕಾರ್ಮಿಕ ನಿರೀಕ್ಷಕ ಶಿವಶಂಕರ್ ತಳವಾರ್, ಎಎಸ್‌ಐ ಮಹಾಂತೇಶ, ಪಿಸಿ ರಾಮಾಂಜಿನಿ, ಡಿಇಒ ವಿಘ್ನೇಶ್, ಕೃಷಿ ಇಲಾಖೆಯ ಜ್ಯೋತಿ, ನವ್ಯ ಪ್ರಸಾಂತ್, ಮಕ್ಕಳ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕಿ ಚಂದ್ರಕಲಾ, ರೀಚ್ ಸಂಸ್ಥೆಯ ಸಂಯೋಜಕ ಎಚ್. ಹನುಮಂತಪ್ಪ, ಸಿಆರ್‌ಪಿ ರೇಣುಕಾರಾಧ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.