Ballari | ಸಮ ಸಮಾಜ ನಿರ್ಮಾಣದ ಆಶಯದೊಂದಿಗೆ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ತೀರ್ಮಾನ : ನಟ ಚೇತನ್ ಅಹಿಂಸಾ
ಬಳ್ಳಾರಿ/ಕಂಪ್ಲಿ: ಬಡವರು ಹಾಗೂ ಸಮ ಸಮಾಜ ನಿರ್ಮಾಣದ ಆಶಯದೊಂದಿಗೆ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ನಟ ಚೇತನ್ ತಿಳಿಸಿದರು.
ಪಟ್ಟಣಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ ಅವರು, ಸಣಾಪುರ ರಸ್ತೆಯ ಅಂಬೇಡ್ಕರ್ ಕಾಲೋನಿ ಸಮೀಪ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ, ಬಳಿಕ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಸ್. ರುದ್ರಮುನಿ ನೇತೃತ್ವದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಹೊಸ ರಾಜಕೀಯ ಪರ್ಯಾಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಮಾನ ಮನಸ್ಕರ ಸಭೆಗಳನ್ನು ನಡೆಸುತ್ತಿದ್ದು, ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಡಾ. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನದಿಂದ ಸಮಾನತೆ, ಮತದಾನದ ಹಕ್ಕು ಸೇರಿದಂತೆ ಬಹುಜನರ ಗೌರವಯುತ ಬದುಕಿಗೆ ಭದ್ರ ಬುನಾದಿ ಸಿಕ್ಕಿದೆ. ಅವರ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್ ಸಂಘದ ಅಧ್ಯಕ್ಷ ಎಸ್. ರುದ್ರಮುನಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಕೇವಲ ವ್ಯಕ್ತಿಯಲ್ಲ, ಶೋಷಿತರ ಧ್ವನಿ ಮತ್ತು ಜ್ಞಾನದ ಪ್ರತೀಕವಾಗಿದ್ದು, ಅವರ ಕೊಡುಗೆಗಳು ಭಾರತದ ಪ್ರಜಾಪ್ರಭುತ್ವದ ಅಡಿಪಾಯವಾಗಿವೆ ಎಂದು ಹೇಳಿದರು.
ಈ ವೇಳೆ ವಿಜಯಕುಮಾರ, ಹೊನ್ನೂರಪ್ಪ, ತಿಪ್ಪೇಸ್ವಾಮಿ, ಬಾಬು, ಮರಿಸ್ವಾಮಿ, ಯಲ್ಲಪ್ಪ, ಧನಂಜಯ, ರವಿ ಮಣ್ಣೂರು, ಪ್ರಕಾಶ್, ಗ್ಯಾಸ್ ರಾಜ್, ಮಾರೆಣ್ಣ, ಉಮೇಶ್, ಮಂಜು, ರಾಜ್, ಸುಂದರ, ಸುದೀಪ್, ಆನಂದ, ವಿದ್ಯಾ, ದುರುಗೇಶ್, ಪುರುಷೋತ್ತಮ, ಕುಬೇರ, ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.