Siruguppa | ತೆಕ್ಕಲಕೋಟೆಯಲ್ಲಿ ಬೆಂಕಿಗೆ ಹುಲ್ಲಿನ ಬಣವೆ ಭಸ್ಮ
ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ ಪಟ್ಟಣದ 10ನೇ ವಾರ್ಡಿನ ಸಿದ್ದರಾಮೇಶ್ವರ ದೇವಸ್ಥಾನದ ಸಮೀಪ ಶನಿವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಎರಡು ಹುಲ್ಲಿನ ಬಣವೆಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಜೆ. ರೇವಣ್ಣ ಹಾಗೂ ಜಡೆ ಸಿದ್ದರಾಮೇಶ್ವರ ಅವರಿಗೆ ಸೇರಿದ ಬಣವೆಗಳಿಗೆ ಬೆಂಕಿ ತಗುಲಿದ ಪರಿಣಾಮ ಸುಮಾರು 10 ಎಕರೆ ಭತ್ತದ ಮೇವನ್ನು ಸಂಗ್ರಹಿಸಿಟ್ಟಿದ್ದ ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಘಟನೆಯಲ್ಲಿ ಸುಮಾರು 1 ಲಕ್ಷ ರೂ. ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಎಸ್. ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಮಜರ್ ಹಾಸನ್ ನೇತೃತ್ವದ ಸಿಬ್ಬಂದಿಗಳಾದ ಶಂಭುಲಿಂಗ ಹೊಂಬಾಳೆ, ಜಿ. ಸುಧೀರ್ ಕುಮಾರ್, ರಾಜಬಕ್ಷಿ, ಮಂಜುನಾಥ ಮತ್ತು ಪುಲಿಶೇಖರ್ ಸ್ಥಳಕ್ಕೆ ಧಾವಿಸಿ, ಜೆಸಿಬಿ ಸಹಾಯದೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.