Sandur | ಮುಂಗಾರು ಬೆಳೆ ವಿಮೆ ನೋಂದಣಿ ಆರಂಭ : ರೈತರು ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ಮನವಿ
ಸಂಡೂರು : 2026-27ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿ ವಿವಿಧ ಕೃಷಿ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ತಾಲೂಕಿನ ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮನವಿ ಮಾಡಿದೆ.
ಸಹಾಯಕ ಕೃಷಿ ನಿರ್ದೇಶಕ ಮುಹಮ್ಮದ್ ರಫಿಯುಲ್ಲ ರಜ್ವಿ ಮಾತನಾಡಿ, ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ ಸೇರಿದಂತೆ ವಿವಿಧ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದಲ್ಲಿ ವಿಮಾ ಯೋಜನೆಯಡಿ ರೈತರಿಗೆ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.
ಬೆಳೆ ಹಾನಿ ಸಂಭವಿಸಿದರೆ ರೈತರು ಕಡ್ಡಾಯವಾಗಿ 72 ಗಂಟೆಗಳೊಳಗೆ ಕೃಷಿ ಇಲಾಖೆ ಅಥವಾ ಸಂಬಂಧಿತ ವಿಮಾ ಕಂಪನಿಗೆ ಮಾಹಿತಿ ನೀಡಬೇಕು. ಪರಿಹಾರ ಪಡೆಯಲು ಇದು ಅತ್ಯಗತ್ಯವಾಗಿದ್ದು, ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಅವರು ಸಲಹೆ ನೀಡಿದರು.
ಯೋಜನೆಯಡಿ ಎಳ್ಳು, ಸೂರ್ಯಕಾಂತಿ, ಜೋಳ, ಮೆಕ್ಕೆಜೋಳ, ಹತ್ತಿ, ಕೆಂಪು ಮೆಣಸಿನಕಾಯಿ, ಈರುಳ್ಳಿ, ರಾಗಿ, ಸಜ್ಜೆ, ನವಣೆ, ತೊಗರಿ, ನೆಲಗಡಲೆ ಹಾಗೂ ಹುರುಳಿ ಸೇರಿದಂತೆ ವಿವಿಧ ಬೆಳೆಗಳಿಗೆ ನಿಗದಿತ ಪ್ರೀಮಿಯಂ ಪಾವತಿಸಿ ವಿಮೆ ಮಾಡಿಸಿಕೊಳ್ಳಬಹುದಾಗಿದೆ. ವಿವಿಧ ಬೆಳೆಗಳಿಗೆ ಜುಲೈ 15, ಜುಲೈ 31 ಹಾಗೂ ಆಗಸ್ಟ್ 14 ನೋಂದಣಿಯ ಅಂತಿಮ ದಿನಾಂಕ ನಿಗದಿಯಾಗಿದೆ.
ರೈತರು ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ವ್ಯವಹಾರದ ಬ್ಯಾಂಕ್‌ಗಳ ಮೂಲಕ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಸಂಡೂರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.