Ballari | ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮ
ಮಕ್ಕಳನ್ನು ದೂರದ ಊರು, ವಿದೇಶಗಳಲ್ಲಿ ನೆಲೆಸುವಂತೆ ಮಾಡುವ ಪೋಷಕರು ವೃದ್ಧಾಶ್ರಮ ಸೇರುವ ಪರಿಸ್ಥಿತಿ ಹೆಚ್ಚುತ್ತಿದೆ: ಡಾ.ಕುಂಬಾರ ವೀರಭದ್ರಪ್ಪ
ಬಳ್ಳಾರಿ: ಮಕ್ಕಳನ್ನು ವಿದೇಶಗಳಲ್ಲಿ ಅಥವಾ ಉನ್ನತ ಹುದ್ದೆಗಳಲ್ಲಿ ನೆಲೆಸುವಂತೆ ಮಾಡಲು ಹೆಣಗಾಡುವ ಪೋಷಕರು, ಅಂತಿಮವಾಗಿ ವೃದ್ಧಾಶ್ರಮ ಸೇರುವ ದುರಂತ ಪರಿಸ್ಥಿತಿ ಇಂದು ಹೆಚ್ಚುತ್ತಿದೆ ಎಂದು ಲೇಖಕ ಡಾ.ಕುಂಬಾರ ವೀರಭದ್ರಪ್ಪ ಕೊಟ್ಟೂರು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ನಜೀರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಹಣವೇ ಕೇಂದ್ರಬಿಂದುವಾಗಿದೆ. ಆದರೆ, ಮನುಷ್ಯತ್ವ ಹಾಗೂ ಹಿರಿಯರನ್ನು ಗೌರವಿಸುವ ಮೌಲ್ಯಗಳಿಗೆ ಸೂಕ್ತ ಸ್ಥಾನ ಇಲ್ಲದಂತಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ 9ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸೃಜನಾತ್ಮಕ ಕಲೆ, ಬರವಣಿಗೆ, ಪ್ರದರ್ಶನ ಕಲೆ ಹಾಗೂ ವಿಜ್ಞಾನ ಕ್ಷೇತ್ರದ ನೂತನ ಆವಿಷ್ಕಾರ ಚಟುವಟಿಕೆಗಳಿಗೆ ಸಂಬಂಧಿಸಿದ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್. ಹೊಸಮನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಎಂ., ಜಿಲ್ಲಾ ನಿರೂಪಣಾಧಿಕಾರಿ ಸವಿತಾ ಸಿ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧೆ ನಂದಿನಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ತ್ರಿವೇಣಿ ಪತ್ತಾರ್, ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್ ಸೇರಿದಂತೆ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗದವರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.