ಸಂಡೂರಿನಲ್ಲಿ ಕನ್ನಡ ಸಾಹಿತ್ಯ ಭವನ ಲೋಕಾರ್ಪಣೆ
ಸಂಡೂರು: ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ಸಭಾಭವನದ ಶಂಕುಸ್ಥಾಪನೆ ಸಮಾರಂಭ ನಡೆಯಿತು.
ಸಂಸದ ಈ.ತುಕಾರಾಂ ಮಾತನಾಡಿ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ. ಸಂಡೂರು ತನ್ನ ವಿಶಿಷ್ಟ ಸಂಸ್ಕಾರ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಗುರುತಿಸಿಕೊಂಡಿದೆ. ಸಭಾಭವನದ ಮೇಲ್ಚಾವಣಿ ನಿರ್ಮಾಣಕ್ಕೆ ಸಿಎಂಐಡಿಪಿ ಹಾಗೂ ಶಾಸಕರ ಅನುದಾನದಡಿ ಹೆಚ್ಚುವರಿಯಾಗಿ 1.25 ಕೋಟಿ ನೀಡಲಾಗುವುದು ಎಂದು ಘೋಷಿಸಿದರು.
ಸಂಡೂರು ಶಾಸಕಿ ಅನ್ನಪೂರ್ಣ ಈ. ತುಕಾರಾಂ ಮಾತನಾಡಿ, ಈ ಭವನ ಕೇವಲ ಇಟ್ಟಿಗೆ-ಸಿಮೆಂಟ್‌ನ ಕಟ್ಟಡವಾಗದೆ ನಾಡಿನ ಸಂಸ್ಕೃತಿ, ಜಾನಪದ, ನಾಟಕ ಹಾಗೂ ಸಾಹಿತ್ಯ ಚಟುವಟಿಕೆಗಳ ನಿರಂತರ ಕೇಂದ್ರವಾಗಬೇಕು. ಆಧುನಿಕ ಯುಗದಲ್ಲಿ ಯುವಕರು ಮತ್ತು ಮಕ್ಕಳಲ್ಲಿ ಕನ್ನಡ ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸ ಬೆಳೆಸಲು ಇದು ನೆರವಾಗಬೇಕು. ಕ್ಷೇತ್ರದಲ್ಲಾಗುವ ಕನ್ನಡಪರ ಕಾರ್ಯಕ್ರಮಗಳಿಗೆ ಹಾಗೂ ಭವನದ ಮುಂದಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಡೂರು ವಿರಕ್ತಮಠದ ಪ್ರಭು ಮಹಾಸ್ವಾಮಿಜೀ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಟಿ ರುದ್ರಪ್ಪ, ಬಿಇಒ ಡಾ.ಐ.ಆರ್.ಅಕ್ಕಿ, ನಾಡೋಜ ಚಿತ್ರಕಲಾವಿದ ವಿ.ಟಿ.ಕಾಳೆ, ಸಿ.ಎಂ.ಶಿಗ್ಗಾವಿ, ಡಾ.ವೃಷಬೇಂದ್ರ ಆಚಾರ್, ಡಾ.ವಸುಂಧರಾ ಭೂಪತಿ, ಡಾ.ಚಂದ್ರಕಾಂತ್ ವಡ್ಡು, ಶಂಕ್ರಪ್ಪ ತೋರಣಗಲ್ಲು, ತುಮಟಿ ಲಕ್ಷ್ಮಣ, ಬಿ.ಆರ್.ಮಸೂತಿ, ಮಹಮ್ಮದ್ ಅಯೂಬ್, ಡಾ.ಪಿ.ಹುಚ್ಚುಸಾಬ್, ಪ್ರಕಾಶ್ ಮೂರ್ತಿ, ಡಾ.ಕೆ.ಶಿವಲಿಂಗಪ್ಪ ಹಂದಿಹಾಳ್, ಡಾ.ಮೃತ್ಯುಂಜಯ ರುಮಾಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.