Ballari | ಸಮಾಜಮುಖಿ ನಾಯಕತ್ವ ಬೆಳೆಸುವುದೇ ಜೆಸಿಐ ಸಂಸ್ಥೆಯ ಧ್ಯೇಯ: ವಸಂತಕುಮಾರ್
ಕಂಪ್ಲಿ (ಬಳ್ಳಾರಿ): ಯುವಜನತೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಜೆಸಿಐ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ಜೆಸಿಐ ವಲಯ–14ರ ಪೂರ್ವಾಧ್ಯಕ್ಷ ಜೆಸಿ ಎಚ್‌ಜಿಎಫ್ ಕೆ.ವಿ. ವಸಂತಕುಮಾರ್ ಹೇಳಿದರು.
ಗಂಗಾವತಿಯ ಆನೆಗುಂದಿ ರಸ್ತೆಯಲ್ಲಿರುವ ನೇಚರ್ ಟ್ರಯಲ್ಸ್ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಜೆಸಿಐ ಅಲುಮ್ನಿ ಕ್ಲಬ್ ಕಂಪ್ಲಿ ರೀಜನ್ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಐದು ದಶಕಗಳಿಂದ ಜೆಸಿಐ ಕಂಪ್ಲಿ ಘಟಕವು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಲಯ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದೆ. ಜೆಸಿಐ ಸದಸ್ಯತ್ವವು 40 ವರ್ಷ ವಯಸ್ಸಿನವರೆಗೆ ಮಾತ್ರ ಇದ್ದರೂ, ಒಮ್ಮೆ ಸದಸ್ಯರಾದವರು ಜೀವನಪರ್ಯಂತ ಸಮಾಜಸೇವೆಯಲ್ಲಿ ತೊಡಗಿರಬೇಕು ಎಂಬ ಉದ್ದೇಶದಿಂದ 2020ರಲ್ಲಿ ಸೀನಿಯರ್ ಮೆಂಬರ್ ಅಸೋಸಿಯೇಷನ್ (ಎಸ್‌ಎಂಎ) ಆರಂಭಿಸಲಾಯಿತು. ಬಳಿಕ ಜೆಸಿಐ ಅಲುಮ್ನಿ ಕ್ಲಬ್ ರೀಜನ್ ರೂಪುಗೊಂಡಿದ್ದು, 40 ವರ್ಷ ಮೇಲ್ಪಟ್ಟ ಸದಸ್ಯರು ಇದರ ಮೂಲಕ ಸಮಾಜ ಸೇವೆ ಮುಂದುವರಿಸಬಹುದು ಎಂದು ತಿಳಿಸಿದರು.
1998ರಲ್ಲಿ ಜೆಸಿಐ ವಿಜಯನಗರ–ಕಂಪ್ಲಿ ಘಟಕದ ಮೊದಲ ಅಧ್ಯಕ್ಷರಾಗಿ ಡಿ. ಮೌನೇಶ್ ಅವರಿಗೆ ಪ್ರಮಾಣವಚನ ಬೋಧಿಸಿದ್ದನ್ನು ಸ್ಮರಿಸಿದ ಅವರು, ಇಂದು ಅದೇ ಮೌನೇಶ್ ಅವರು ಜೆಸಿಐ ಅಲುಮ್ನಿ ಕ್ಲಬ್ ಕಂಪ್ಲಿ ರೀಜನ್ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಸಂಸ್ಥೆಯು ಕೇವಲ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಸಮಾಜಕ್ಕೆ ದೀರ್ಘಕಾಲದ ಉಪಯೋಗವಾಗುವ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಜೆಸಿ ಡಿ. ಮೌನೇಶ್ ಮಾತನಾಡಿ, ಮೂರುವರೆ ದಶಕಗಳಿಂದ ಜೆಸಿಐ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವುದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ವೈಯಕ್ತಿಕ ಬೆಳವಣಿಗೆಗೆ ಉತ್ತಮ ಅವಕಾಶ ಒದಗಿಸಿದೆ. ಮುಂದೆಯೂ ಪಟ್ಟಣದಲ್ಲಿ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಜೆಸಿಐ ಅಲುಮ್ನಿ ಕ್ಲಬ್ ವಲಯ ಅಧ್ಯಕ್ಷ ಜೆಸಿ ಪಿಡಿಎಂ ಮಾಹಾಬಲೇಶ್ವರ ಅವರು ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು. ಹಿರಿಯ ಸದಸ್ಯರಾದ ಜೆಸಿ ನಿರಂಜನ್ ಗುಪ್ತ ಹಾಗೂ ಜೆಸಿ ಎಸ್.ಎಂ. ನಾಗರಾಜಸ್ವಾಮಿ ಮಾತನಾಡಿ ಶುಭ ಹಾರೈಸಿದರು. ವಲಯ ಉಪಾಧ್ಯಕ್ಷ ಜೆಎಫ್‌ಎಫ್ ಪಿಡಿಎಂ ಪ್ರಸಾದ್ ಗಡಾದ್ ನೂತನ ಪದಾಧಿಕಾರಿಗಳಿಗೆ ಜೆಸಿಐ ಪಿನ್‌ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಂತಿಲಾಲ್ ಸಿಂಘ್ವಿ, ರಮೇಶ್ ರೆಡ್ಡಿ, ಮಾಧುಸ್ವಾಮಿ, ಕೊಟ್ಯಾನ್, ಪೂರ್ಣಿಮಾ, ದಿವ್ಯಾ, ಡಾ. ಜಂಬುನಾಥಗೌಡ, ರಾಮರಾಜು, ಡಾ. ಸುಧಾಕರ್, ಕೆ.ಎಂ. ವಾಗೀಶ್, ರುದ್ರಪ್ಪ, ರಾಘವೇಂದ್ರ, ಡಾ. ಭರತ್ ಪದ್ಮಶಾಲಿ, ಮಂಜೇಶ್, ಜೆಸಿ ಬ್ರಹ್ಮಾನಂದ, ಜೆಸಿ ಜಿ. ಚಂದ್ರಶೇಖರಗೌಡ, ಡಿ. ಮಂಜೇಶ್, ಡಿ. ವೀಣಾ ಮೌನೇಶ್, ಚೈತ್ರ ಪ್ರಸಾದ್ ಗಡಾದ್, ಸುನಿತಾ, ಕಾಂಚನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.