Ballari | ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಗುರಿಸಾಧನೆಯತ್ತ ಸಾಗಬೇಕು: ಪ್ರೊ.ಸದ್ಯೋಜತಪ್ಪ ಎಸ್.

‘ಸಂಭ್ರಮ ಶನಿವಾರ’ ಅಂಗವಾಗಿ ಮಾದಕ ವ್ಯಸನ ವಿರುದ್ಧ ಜಾಗೃತಿ

Update: 2026-07-18 22:47 IST

ಸಂಡೂರು/ಬಳ್ಳಾರಿ: ಸರ್ಕಾರದ ನಿರ್ದೇಶನದಂತೆ ಪ್ರತಿ ತಿಂಗಳ ಮೂರನೇ ಶನಿವಾರ ಆಚರಿಸಲಾಗುವ ‘ಸಂಭ್ರಮ ಶನಿವಾರ’ ಹಾಗೂ ಬ್ಯಾಗ್ ರಹಿತ ದಿನದ ಅಂಗವಾಗಿ ಸಂಡೂರು ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ (ಪ್ರಾಥಮಿಕ ವಿಭಾಗ), ಬಂಡ್ರಿಯಲ್ಲಿ “ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ ಮತ್ತು ನಿರ್ವಹಣೆ” ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಶನಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣ ಶಾಸ್ತ್ರ ಅಧ್ಯಯನ ವಿಭಾಗದ ಡೀನ್ ಪ್ರೊ. ಸದ್ಯೋಜತಪ್ಪ ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಇಂದಿನ ಸಮಾಜದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರು ಮಾದಕ ವ್ಯಸನ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವ್ಯಸನವು ವ್ಯಕ್ತಿಯ ಆರೋಗ್ಯ, ಶಿಕ್ಷಣ, ಕುಟುಂಬ ಹಾಗೂ ಸಮಾಜದ ಮೇಲೆ ದುಷ್ಪರಿಣಾಮ ಬೀರುವುದರಿಂದ ವಿದ್ಯಾರ್ಥಿಗಳು ಬಾಲ್ಯದಿಂದಲೇ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಗುರಿಯತ್ತ ಸಾಗಬೇಕು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಜೀವನವನ್ನು ಆತ್ಮಾವಲೋಕನ ಮಾಡಿಕೊಂಡು ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿ ಅದನ್ನು ಸಾಧಿಸಲು ನಿರಂತರ ಪರಿಶ್ರಮ ಅಗತ್ಯ ಎಂದು ತಿಳಿಸಿದರು.

ವಾಲ್ಮೀಕಿ ರಾಮಾಯಣದಲ್ಲಿನ ಶ್ರೀರಾಮನ ಆದರ್ಶ ವ್ಯಕ್ತಿತ್ವ, ಸತ್ಯನಿಷ್ಠೆ ಹಾಗೂ ಕರ್ತವ್ಯನಿಷ್ಠೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದ ಅವರು, ತಾಯಿಯ ಪ್ರೀತಿ, ತ್ಯಾಗ ಮತ್ತು ಮಾರ್ಗದರ್ಶನವೇ ಮಕ್ಕಳ ಯಶಸ್ಸಿನ ಅಡಿಪಾಯ ಎಂದು ಹೇಳಿದರು.

“ಕಲ್ಲು ದೇವರು ದೇವರಲ್ಲ” ಎಂಬ ವಚನದ ಆಶಯವನ್ನು ವಿವರಿಸಿದ ಅವರು, ಉತ್ತಮ ನಡೆ, ಮಾನವೀಯತೆ, ಪ್ರಾಮಾಣಿಕತೆ ಹಾಗೂ ಸತ್ಕಾರ್ಯಗಳೇ ನಿಜವಾದ ಧರ್ಮ ಎಂದು ತಿಳಿಸಿದರು.

ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ “Try… Try… Don’t Cry” ಸಂದೇಶವನ್ನು ಉಲ್ಲೇಖಿಸಿ, ಸೋಲುಗಳಿಗೆ ಕುಗ್ಗದೆ ನಿರಂತರ ಪ್ರಯತ್ನಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಬಳಿಕ ಶಾಲೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ನೌಕರ ಸಂಘದ ಅಧ್ಯಕ್ಷ ಸಿದ್ದಣ್ಣ ಯಳವಾರ ಮಾತನಾಡಿ, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ಶಿಕ್ಷಣದ ಮೂಲಕ ಆದರ್ಶ ಪ್ರಜೆಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು.

ಸಹ ಶಿಕ್ಷಕಿ ಕವಿತಾ ಪ್ರಾಸ್ತಾವಿಕವಾಗಿ ಮಾತನಾಡಿ, ಮಾದಕ ವ್ಯಸನದ ದುಷ್ಪರಿಣಾಮಗಳು, ಉತ್ತಮ ಸ್ನೇಹಿತರ ಆಯ್ಕೆ ಹಾಗೂ ಪೋಷಕರು-ಶಿಕ್ಷಕರ ಮಾರ್ಗದರ್ಶನದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಮೀನಾಕ್ಷಿ ಮತ್ತು ತನುಶ್ರೀ ವಚನಗಳನ್ನು ವಾಚಿಸಿದರು. ವಿದ್ಯಾರ್ಥಿಗಳು ಮಾದಕ ವ್ಯಸನ ವಿರೋಧಿ ವಿಷಯಾಧಾರಿತ ಚಿತ್ರಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಗುರು ಕೆ.ಬಿ. ಪ್ರಕಾಶ್ ವಹಿಸಿದ್ದರು. ಮುಖ್ಯಗುರು ಸಿದ್ರಾಮಯ್ಯ ಕೋಡಿಹಳ್ಳಿ, ಶಿಕ್ಷಣ ಪ್ರೇಮಿ ಕಂಚಳ್ಳಿ ನಾಗರಾಜ, ದೇವೇಂದ್ರಪ್ಪ, ಶಿಕ್ಷಕ ಕೊಟ್ರೇಶ್ ಗೌಡ, ಸಹ ಶಿಕ್ಷಕಿ ದ್ರಾಕ್ಷಾಯಣಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೊಟ್ರೇಶ್ ಗೌಡ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News