ಬಳ್ಳಾರಿ | ಬೈಕ್ ಗೆ ಲಾರಿ ಢಿಕ್ಕಿ : ಮಹಿಳೆ ಗಂಭೀರ
ಬಳ್ಳಾರಿ : ಬಳ್ಳಾರಿ ಹೊರವಲಯದ ಬೆಳಗಲ್ ರಸ್ತೆಯ ಕಾಲುವೆ ಸಮೀಪ ಬೈಕ್‌ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಅಪಘಾತದಲ್ಲಿ ಗೌತಮ್ ನಗರದ ನಿವಾಸಿ ವರಲಕ್ಷ್ಮಿ ಎಂಬ ಮಹಿಳೆಯ ಎರಡು ಕಾಲುಗಳ ಮೇಲೆ ಲಾರಿಯ ಚಕ್ರ ಹರಿದಿದ್ದು, ಪರಿಣಾಮ ಅವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುವನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ತಕ್ಷಣ ಕೌಲ್ ಬಜಾರ್ ಪೊಲೀಸರು ಸ್ಥಳಕ್ಕೆ ಧಾವಿಸಿ ಲಾರಿಯನ್ನು ವಶಕ್ಕೆ ಪಡೆದು ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಅಪಘಾತ ನಡೆದ ಸ್ಥಳದಲ್ಲೇ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ.
ನಗರದೊಳಗೆ ಅನಧಿಕೃತವಾಗಿ ಹೆಚ್ಚುವರಿ ಲೋಡ್ ಸಾಗಿಸುತ್ತಿರುವ ಲಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.