Ballari | ಸಫಾಯಿ ಮಿತ್ರರಿಗೆ ಔದ್ಯೋಗಿಕ ಸುರಕ್ಷತಾ ತರಬೇತಿ
ಸಂಡೂರು/ಬಳ್ಳಾರಿ: ಸ್ವಚ್ಛತಾ ಹಿ ಸೇವಾ–2026ರ ಅಂಗವಾಗಿ ಸಂಡೂರು ಪುರಸಭೆ ವತಿಯಿಂದ ಸಫಾಯಿ ಮಿತ್ರ ಸುರಕ್ಷಾ ಶಿಬಿರ ಆಯೋಜಿಸಿ, ಪೌರಕಾರ್ಮಿಕರು ಹಾಗೂ NAMASTE ಯೋಜನೆಯಡಿ ನೋಂದಾಯಿಸಲ್ಪಟ್ಟ ತ್ಯಾಜ್ಯ ಸಂಗ್ರಹಕಾರರಿಗೆ ಔದ್ಯೋಗಿಕ ಸುರಕ್ಷತಾ ತರಬೇತಿ ನೀಡಲಾಯಿತು.
ಸಂಡೂರು ಪುರಸಭೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲಸದ ಸಂದರ್ಭದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ವೈಯಕ್ತಿಕ ಸುರಕ್ಷತಾ ಪರಿಕರಗಳ (PPE) ಬಳಕೆ ಹಾಗೂ ಅವುಗಳ ಮಹತ್ವದ ಕುರಿತು ತರಬೇತಿ ನೀಡಲಾಯಿತು. ದಾವಣಗೆರೆಯ ಹಸಿರು ದಳ ಎನ್‌ಜಿಒದ ಜಿ.ವಿ. ಕಿರಣ್ ಹಾಗೂ ಜಿಲಾನಿ ಅವರು ತರಬೇತಿ ನೀಡಿದರು.
ಕೆಲಸದ ಸ್ವರೂಪಕ್ಕೆ ಅನುಗುಣವಾಗಿ PPE ಕಿಟ್‌ಗಳನ್ನು ಸರಿಯಾಗಿ ಬಳಸುವುದರಿಂದ ಕೆಲಸದ ವೇಳೆ ಎದುರಾಗಬಹುದಾದ ಅಪಾಯಗಳು ಹಾಗೂ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ ಎಂದು ತರಬೇತುದಾರರು ತಿಳಿಸಿದರು. ಈ ಸಂದರ್ಭದಲ್ಲಿ PPE ಕಿಟ್‌ಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಲಾಯಿತು.
NAMASTE ಯೋಜನೆಯಡಿ ನೋಂದಾಯಿಸಲ್ಪಟ್ಟ 53 ತ್ಯಾಜ್ಯ ಸಂಗ್ರಹಕಾರರಿಗೆ ಗುರುತಿನ ಚೀಟಿ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ವಿತರಿಸಲಾಯಿತು. ಜೊತೆಗೆ PPE ಕಿಟ್‌ಗಳನ್ನು ವಿತರಿಸಿ, ಅವುಗಳ ಸರಿಯಾದ ಬಳಕೆಯ ಕುರಿತು ಮಾಹಿತಿ ನೀಡಲಾಯಿತು.
ತ್ಯಾಜ್ಯ ಸಂಗ್ರಹಕಾರರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಯಲ್ಲಿರುವ ಮತ್ತು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು. ಸಬ್ಸಿಡಿ ಆಧಾರದ ಮೇಲೆ ವಾಹನ ಖರೀದಿ ಸೌಲಭ್ಯ, ತ್ಯಾಜ್ಯ ಸಂಗ್ರಹಕಾರರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿವೇತನ ಹಾಗೂ ತ್ಯಾಜ್ಯ ನಿರ್ವಹಣಾ ಕಾರ್ಯದಲ್ಲಿ ಪುರಸಭೆಯೊಂದಿಗೆ ನೇರ ಒಪ್ಪಂದ (MoU) ಮಾಡಿಕೊಳ್ಳುವ ಅವಕಾಶಗಳ ಕುರಿತು ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ವಿನಯ್ ಕುಮಾರ್ ಗೌಡ, ಪರಿಸರ ಅಭಿಯಂತರರಾದ ಅನ್ನಪೂರ್ಣ, ಆರೋಗ್ಯ ನಿರೀಕ್ಷಕಿ ಶಿವರಂಜಿನಿ, ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರಾದ ಶೇಖರ್, ಹುಲಿಗೇಶ, ಮಾರೆಶ್, ಹೆಚ್. ಮಲ್ಲ, ಮಲ್ಲಿಕಾರ್ಜುನ, ದೇವಣ್ಣ, ಸಕ್ಷನ್ ಮಷಿನ್ ಆಪರೇಟರ್ ತಿಮ್ಮಾರೆಡ್ಡಿ, 53 ಮಂದಿ ತ್ಯಾಜ್ಯ ಸಂಗ್ರಹಕಾರರು, ನೈರ್ಮಲ್ಯ ಮೇಲ್ವಿಚಾರಕರಾದ ಶಾಂತ, ವಿಜಯ್, ಕಿರಣ್, ಕಮ್ಯೂನಿಟಿ ಮೊಬೈಲೈಸರ್‌ಗಳಾದ ಕಾವ್ಯಾಂಜಲಿ, ಚೈತ್ರ, ಮಾರೆಕ್ಕ, ದೀನಾ, ಅನಿತಾ ಸೇರಿದಂತೆ ಶಿಕ್ಷಕರು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.