Ballari | ಪೌರ ಕಾರ್ಮಿಕರ ಆರೋಗ್ಯ ಕಾಪಾಡುವುದು ಅತ್ಯಂತ ಮುಖ್ಯ: ಡಾ.ರವೀಂದ್ರ ಕನಕೇರಿ
ಬಳ್ಳಾರಿ/ಕಂಪ್ಲಿ: ಪಟ್ಟಣವನ್ನು ದಿನವಿಡೀ ಸ್ವಚ್ಛವಾಗಿಡುವ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವುದು ಅತ್ಯಂತ ಮುಖ್ಯವಾಗಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರವೀಂದ್ರ ಕನಕೇರಿ ತಿಳಿಸಿದರು.
ಇಲ್ಲಿನ ಪುರಸಭೆ ಕಚೇರಿ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿಯ ಜಿಲ್ಲಾ ಸರ್ವೇಕ್ಷಣಾ–ಎನ್‌ಸಿಡಿ ಘಟಕ, ಸ್ಥಳೀಯ ಪುರಸಭೆ ಹಾಗೂ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪೌರ ಕಾರ್ಮಿಕರಿಗಾಗಿ ಆಯೋಜಿಸಿದ್ದ ಎನ್‌ಸಿಡಿ ಕ್ಲಿನಿಕ್‌ನ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಪೌರ ಕಾರ್ಮಿಕರು ಪ್ರತಿದಿನ ಸಾರ್ವಜನಿಕರ ಆರೋಗ್ಯಕ್ಕಾಗಿ ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಾರೆ. ಆದರೆ, ಅವರ ಸ್ವಂತ ಆರೋಗ್ಯವೂ ಅಷ್ಟೇ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕರ ಹಿತದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಂಡು ಸ್ವಚ್ಛತೆಯೊಂದಿಗೆ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರು ಸರದಿಯಲ್ಲಿ ನಿಂತು ಆರೋಗ್ಯ ತಪಾಸಣೆಗೆ ಒಳಪಟ್ಟರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಅರುಣ್‌ಕುಮಾರ್, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್ ಬಾಬು, ವೈದ್ಯರಾದ ಡಾ. ಹಾರಿಕಾ, ಆಪ್ತ ಸಮಾಲೋಚಕ ಡಿ.ಎಂ. ಮಹಮ್ಮದ್, ಶುಶ್ರೂಷಕ ಅಧಿಕಾರಿ ಡಿ. ದೇವಣ್ಣ, ಎಲ್‌ಟಿಒ ಶೃತಿ ಕೋರಿ, ಡಿಇಒ ಚಂದ್ರಶೇಖರ್ ಹಾಗೂ ಪುರಸಭೆಯ ಪೌರ ಕಾರ್ಮಿಕರು ಉಪಸ್ಥಿತರಿದ್ದರು.