Ballari | ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ತಾಳ್ಮೆಯಿಂದ ಸ್ಪಂದಿಸಬೇಕು: ಶಾಸಕ ಜೆ.ಎನ್.ಗಣೇಶ್
ಪ್ರಜಾಸೇವೆ ಆಂದೋಲನ ಸಭೆ
ಬಳ್ಳಾರಿ: ಅಧಿಕಾರಿಗಳು ಜನಸಾಮಾನ್ಯರೊಂದಿಗೆ ತಾಳ್ಮೆಯಿಂದ ವರ್ತಿಸಿ, ಅವರ ಕುಂದುಕೊರತೆಗಳಿಗೆ ಸ್ಪಂದಿಸಬೇಕು ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಹೇಳಿದರು.
ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಣ್ಣಪುಟ್ಟ ಕೆಲಸಗಳಿಗಾಗಿ ಸಾರ್ವಜನಿಕರನ್ನು ಸರ್ಕಾರಿ ಕಚೇರಿಗಳಿಗೆ ತಿಂಗಳುಗಟ್ಟಲೆ ಅಲೆದಾಡಿಸಬಾರದು. ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡದಂತೆ ಚರಂಡಿ ಸ್ವಚ್ಛತೆ, ಕಸ ವಿಲೇವಾರಿ ಹಾಗೂ ಬೀದಿ ದೀಪಗಳ ದುರಸ್ತಿಯಂತಹ ಮೂಲಭೂತ ಕೆಲಸಗಳಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಕಂಡುಬಂದರೆ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕೃಷಿ ಕೆಲಸಗಳಿಗೆ ಮಕ್ಕಳನ್ನು ತೊಡಗಿಸದೆ ಶಿಕ್ಷಣ ಕೊಡಿಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಎನ್. ಝುಬೇರ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಆಯೋಜಿಸಲಾದ ಪ್ರಜಾಸೇವಾ ಸಭೆಗಳಲ್ಲಿ ಸಲ್ಲಿಕೆಯಾದ 3,281 ಅರ್ಜಿಗಳ ಪೈಕಿ 3,085 ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದಿರುವ 196 ಅರ್ಜಿಗಳನ್ನು ಶೀಘ್ರದಲ್ಲೇ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.
ಇಲಾಖಾವಾರು ಮಳಿಗೆ ಸ್ಥಾಪನೆ :
ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ, ಸಮಾಜ ಕಲ್ಯಾಣ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಪ್ರತ್ಯೇಕ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ವಸತಿ, ಕುಡಿಯುವ ನೀರು, ರಸ್ತೆ, ಪಿಂಚಣಿ ಹಾಗೂ ವಿದ್ಯುತ್ಗೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು ಸಲ್ಲಿಸಿದರು. ಸಲ್ಲಿಕೆಯಾದ ಅರ್ಜಿಗಳಿಗೆ ಗಣಕೀಕೃತ ಸ್ವೀಕೃತಿ ರಸೀದಿ ಹಾಗೂ ಟ್ರ್ಯಾಕಿಂಗ್ ಸಂಖ್ಯೆ ನೀಡಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ವಿಶೇಷ ಚೇತನರೊಬ್ಬರ ಮನವಿಗೆ ಸ್ಪಂದಿಸಿದ ಶಾಸಕ ಜೆ.ಎನ್. ಗಣೇಶ್, ಸಿಎಸ್ಆರ್ ಅನುದಾನದಡಿ ತ್ರಿಚಕ್ರ ವಾಹನ ವಿತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಕುರುಗೋಡು ಪುರಸಭೆ ಅಧ್ಯಕ್ಷ ಮಂಜುನಾಥ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್, ಜಿ.ಪಂ. ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.