Ballari | ಲಾರಿ ಹರಿದು ಇಬ್ಬರು ಪಾದಚಾರಿಗಳು ಮೃತ್ಯು

Update: 2026-08-08 20:57 IST

ಸಂಡೂರು/ಬಳ್ಳಾರಿ : ಅದಿರು ಸಾಗಿಸುತ್ತಿದ್ದ ಲಾರಿ ಹರಿದು ಇಬ್ಬರು ಪಾದಚಾರಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ವೆಂಕಟಗಿರಿ ಗ್ರಾಮದ ಬಳಿ ಗುರುವಾರ ನಡೆದಿದೆ.

ಮೃತರನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದ ನಿವಾಸಿ ಕುಮಾರ (34) ಹಾಗೂ ಹಂಪಿನಕಟ್ಟೆ ಗ್ರಾಮದ ನಿವಾಸಿ ಮಂಜುನಾಥ (38) ಎಂದು ಗುರುತಿಸಲಾಗಿದೆ.

ಇಬ್ಬರೂ ಕೆಲಸ ಮುಗಿಸಿಕೊಂಡು ಸ್ವಗ್ರಾಮಗಳಿಗೆ ತೆರಳಲು ಬಸ್‌ ಹತ್ತುವ ಸಲುವಾಗಿ ವೆಂಕಟಗಿರಿ ಗ್ರಾಮದತ್ತ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಅದಿರು ಸಾಗಿಸುವ ಲಾರಿ ನಿಯಂತ್ರಣ ಕಳೆದುಕೊಂಡು ಇಬ್ಬರ ಮೇಲೂ ಹರಿದಿದೆ ಎನ್ನಲಾಗಿದೆ.

ಲಾರಿಯ ಅಡಿಗೆ ಸಿಲುಕಿದ ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿದು ಬಂದಿದೆ.

ವೆಂಕಟಗಿರಿ ಭಾಗದಲ್ಲಿ ಅದಿರು ಸಾಗಿಸುವ ಭಾರಿ ವಾಹನಗಳ ಸಂಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಾದಚಾರಿಗಳು ಹಾಗೂ ಸ್ಥಳೀಯರ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ. ಭಾರಿ ವಾಹನಗಳ ವೇಗ ನಿಯಂತ್ರಣ, ಸಂಚಾರ ನಿಯಮಗಳ ಪಾಲನೆ ಹಾಗೂ ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವೆಂಕಟಾಪುರ ಗ್ರಾಮದ ನಿವಾಸಿ ಅಂಜಿನಪ್ಪ ನೀಡಿದ ದೂರಿನ ಆಧಾರದ ಮೇಲೆ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಅಪಘಾತಕ್ಕೆ ನಿಖರ ಕಾರಣ ಹಾಗೂ ಲಾರಿ ಚಾಲಕನ ಅಜಾಗರೂಕತೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News