Ballari | ಸ್ವಾತಂತ್ರ್ಯೋತ್ಸವ ಅಂಗವಾಗಿ ಸಂಡೂರಿನಲ್ಲಿ ಸ್ವಚ್ಛತಾ ಅಭಿಯಾನ

Update: 2026-08-06 20:23 IST

ಸಂಡೂರು/ಬಳ್ಳಾರಿ : 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ “ತ್ಯಾಜ್ಯದಿಂದ ಸ್ವಾತಂತ್ರ್ಯ – ಸ್ವಚ್ಛ ನಗರ, ಆರೋಗ್ಯಕರ ರಾಷ್ಟ್ರ” ಅಭಿಯಾನದಡಿ ಸಂಡೂರು ಪುರಸಭೆ ನಗರದ ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.

ವಾರ್ಡ್ ಸಂಖ್ಯೆ–3ರ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತ್ಯಾಜ್ಯದ ಮೂಲದಲ್ಲಿಯೇ ವಿಂಗಡಣೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಿರುವುದು, ತ್ಯಾಜ್ಯ ಸುಡುವುದನ್ನು ತಡೆಯುವುದು ಹಾಗೂ ಮುಕ್ತ ಬಹಿರಂಗ ಶೌಚಮುಕ್ತ (ಒಡಿಎಫ್) ಪರಿಸರ ನಿರ್ಮಾಣದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಸಮುದಾಯ ಸಂಘಟಕರು, ಆರೋಗ್ಯ ವಿಭಾಗದ ಸಿಬ್ಬಂದಿ, ದೇವಸ್ಥಾನ ಟ್ರಸ್ಟ್ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದೇ ವೇಳೆ ವಾರ್ಡ್ ಸಂಖ್ಯೆ–12ರ ಕುರ್ಮಟ್ಟಿ ರಸ್ತೆಯಲ್ಲಿದ್ದ ಗಾರ್ಬೇಜ್ ವಲ್ನರಬಲ್ ಪಾಯಿಂಟ್ (ಜಿವಿಪಿ) ಅನ್ನು ತೆರವುಗೊಳಿಸಿ, ಸ್ಥಳವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಯಿತು. ಗುಡ್ಡದ ಮೇಲಿರುವ ಸುಮಾರು 80 ಮನೆಗಳಿಗೆ ಕಸ ಸಂಗ್ರಹ ವಾಹನ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸ್ಥಳದಲ್ಲಿಯೇ ವಿಕೇಂದ್ರೀಕೃತ ಹಸಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಿ, ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ, ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ. ವಿನಯ್ ಕುಮಾರ್ ಗೌಡ, ಪರಿಸರ ಅಭಿಯಂತರ ಅನ್ನಪೂರ್ಣ ಡಿ., ಕಿರಿಯ ಆರೋಗ್ಯ ನಿರೀಕ್ಷಕಿ ಕೆ. ಶಿವರಂಜಿನಿ, ಸಮುದಾಯ ಸಂಘಟಕರಾದ ಕಾವ್ಯಾಂಜಲಿ, ಧೀನಾ, ಮರಕ್ಕಾ, ಅನಿತಾ, ಚೈತ್ರಾ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಪುರಸಭೆ ಅಧಿಕಾರಿಗಳು ಮಾತನಾಡಿ, ಸ್ವಚ್ಛ ನಗರ ನಿರ್ಮಾಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಹಸಿ ಹಾಗೂ ಒಣ ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸಿ ನೀಡುವ ಮೂಲಕ ಪ್ರತಿಯೊಬ್ಬರೂ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಈ ಅಭಿಯಾನವು ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News