ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕ್ರಮಕ್ಕೆ ಹರಿಕ ಮಂಜುನಾಥ್ ಗೆ ಆಹ್ವಾನದಿಂದ ವಿವಾದ

ದ್ವೇಷ ಭಾಷಣಕಾರರಿಗೆ ವೇದಿಕೆ ನೀಡುವ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

Update: 2026-07-26 10:59 IST

ಬಳ್ಳಾರಿ: ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹರಿಕ ಮಂಜುನಾಥ್ ಎಂಬವರನ್ನು ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಪತ್ರಕರ್ತ ನವೀನ್ ಸೂರಿಂಜೆ ಈ ನಡೆಯನ್ನು ಟೀಕಿಸಿದ್ದು, ದ್ವೇಷ ಭಾಷಣ ಮಾಡಿದರೆ ಭಾಷಣಕಾರರ ಜೊತೆಗೆ ಕಾರ್ಯಕ್ರಮದ ಸಂಘಟಕರ ವಿರುದ್ಧವೂ ಎಫ್‌ಐಆರ್ ದಾಖಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಸಮಾಜಿಕ ಜಾಲಾತಾಣದಲ್ಲಿ ಪೋಸ್ಟ್‌ ಮಾಡಿರುವ ಸೂರಿಂಜೆ ಅವರು, ಹರಿಕ ಮಂಜುನಾಥ್ ಎಂಬ ಯುವತಿ ಅಪ್ರಬುದ್ಧವಾಗಿ ಮಾತನಾಡುವ ದ್ವೇಷ ಭಾಷಣಕಾರ್ತಿ. ಈ ಒಂದೇ ಒಂದು ಅರ್ಹತೆಯಲ್ಲದೇ, ಆಕೆ ಭಾಷಣ ಮಾಡುವ ಯಾವ ಅರ್ಹತೆಯನ್ನೂ ಹೊಂದಿಲ್ಲ. ಹಾಗಾಗಿ ಈಕೆಯ ಭಾಷಣಕ್ಕೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಬಳ್ಳಾರಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಹಾಗೂ ಬಳ್ಳಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮದ್ ಹರೀಸ್ ಸುಮೇರ್ ಹೊಣೆಗಾರರಾಗುತ್ತಾರೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ದ್ವೇಷ ಭಾಷಣ ಮಾಡುವವರ ಮೇಲೆ ಮಾತ್ರ ಪ್ರಕರಣ ದಾಖಲಿಸಲಾಗುತ್ತಿತ್ತು. ಈಗ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಕಾರ್ಯಕ್ರಮದ ಆಯೋಜಕರ ವಿರುದ್ಧವೂ ಪ್ರಕರಣ ದಾಖಲಾಗುತ್ತದೆ. 2025ರ ಅಕ್ಟೋಬರ್ 25ರಂದು ಕಲ್ಲಡ್ಕ ಪ್ರಭಾಕರ್‌ ಭಟ್ ಅವರು ಪುತ್ತೂರಿನ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣ ಮಾಡಿದ್ದರು. ಪ್ರಭಾಕರ್ ಭಟ್ ಅವರ ಜೊತೆಗೆ ಕಾರ್ಯಕ್ರಮದ ಸಂಘಟಕರ ವಿರುದ್ಧವೂ ಎಫ್‌ಐಆರ್ ದಾಖಲಾಗಿತ್ತು. ಇಷ್ಟಕ್ಕೂ ಇಬ್ಬರು ಐಎಎಸ್ ಅಧಿಕಾರಿಗಳು ಇಂತಹ ದ್ವೇಷ ಭಾಷಣಕಾರ್ತಿಯ ‘ಪ್ರೇರಣಾ ನುಡಿ’ ಕೇಳುವ ದುರ್ದೈವ ಯಾಕೆ ಬಂತು? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೊಗಳುತ್ತಾರೆ. ಈ ಷಡಕ್ಷರಿ ಆರೆಸ್ಸೆಸ್‌/ಬಿಜೆಪಿಯನ್ನು ಬೆಳೆಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಾರೆ. ಹಾಗಾಗಿ ದ್ವೇಷ ಭಾಷಣಕಾರರನ್ನು ಕರೆದು ವೇದಿಕೆ ಕೊಡುವ ಇಂತಹ ಸಂಘಟನೆಗಳಿಗೆ ಸರ್ಕಾರ ಅನುದಾನ ಕೊಡುವುದನ್ನು ನಿಲ್ಲಿಸಬೇಕು. ದ್ವೇಷ ಭಾಷಣಕಾರರಿಗೆ ತಮ್ಮ ವೇದಿಕೆಯಲ್ಲಿ ಮಾನ್ಯತೆ ಕೊಡುವ ಸಂಘಟನೆಗಳ ಜೊತೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳು ಸಂಪರ್ಕ ಕಡಿದುಕೊಳ್ಳಬೇಕು ಎಂದು ನವೀನ್ ಸೂರಿಂಜೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News