ಕಂಪ್ಲಿ: ಹಿರಿಯ ಸಾಹಿತಿ ಜಿ. ಪ್ರಕಾಶ್ ಅವರು ಮೃದು ಮನಸ್ಸಿನ ದೈತ್ಯ ಪ್ರತಿಭೆಯಾಗಿದ್ದರು. ಹದಿನೆಂಟು ಮೌಲ್ಯಯುತ ಕೃತಿಗಳನ್ನು ರಚಿಸುವ ಮೂಲಕ ಯುವ ಬರಹಗಾರರಿಗೆ ನಿರಂತರ ಪ್ರೇರಣೆಯಾಗಿದ್ದರು ಎಂದು ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಸ್ಮರಿಸಿದರು.

ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಸಾಹಿತ್ಯ ಸಿರಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದಿವಂಗತ ಜಿ. ಪ್ರಕಾಶ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಕಾಶ್ ಅವರ ಸರಳ ಸಜ್ಜನಿಕೆ, ಬದುಕಿನ ಶಿಸ್ತು, ಸಮಯಪ್ರಜ್ಞೆ ಮತ್ತು ಸಾಹಿತ್ಯದ ಮೇಲಿನ ಅಪಾರ ಪ್ರೀತಿ ಇಂದಿನ ಪೀಳಿಗೆಗೆ ದಾರಿದೀಪವಾಗಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಮಾತನಾಡಿ, ಜಿ. ಪ್ರಕಾಶ್ ಕೇವಲ ಬರಹಗಾರರಷ್ಟೇ ಅಲ್ಲ, ಒಬ್ಬ ಪ್ರಗತಿಪರ ಚಿಂತಕರು ಹಾಗೂ ಶರಣ ಸಾಹಿತ್ಯದ ಆಳವಾದ ಅಧ್ಯಯನಕಾರರಾಗಿದ್ದರು. ವಕೀಲರಾಗಿ, ಹವ್ಯಾಸಿ ರಂಗಭೂಮಿ ಕಲಾವಿದರಾಗಿ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ. ಅವರ ಅಗಲಿಕೆಯಿಂದ ಸಾಹಿತ್ಯ ಲೋಕದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ ಎಂದು ವಿಷಾದಿಸಿದರು.

ಸಭೆಯಲ್ಲಿ ಬಡಿಗೇರ ಜಿಲಾನ್‌ಸಾಬ್ ಮತ್ತು ಚಂದ್ರಯ್ಯ ಸೊಪ್ಪಿಮಠ ಕವನ ವಾಚನದ ಮೂಲಕ ನುಡಿನಮನ ಸಲ್ಲಿಸಿದರು.

ಸಾಹಿತ್ಯಾಭಿಮಾನಿಗಳಾದ ಘನಮಠಯ್ಯ ಹಿರೇಮಠ, ಮಡಿವಾಳ ಹುಲುಗಪ್ಪ, ಬಂಗಿ ದೊಡ್ಡ ಮಂಜುನಾಥ, ಎಸ್.ಡಿ. ಬಸವರಾಜ, ಅಂಬಿಗರ ಮಂಜುನಾಥ, ಎಸ್. ಶಾಮಸುಂದರರಾವ್, ಎಲಿಗಾರ ವೆಂಕಟರೆಡ್ಡಿ, ಮುದಕಪ್ಪ ನೆಲಜೇರಿ, ಕೆ. ಚಂದ್ರಶೇಖರ, ಕಾಳಿಂಗವರ್ಧನ ಹಾದಿಮನಿ, ಎ. ಶಂಕರ್, ಸಜ್ಜೇದ ವೀರಭದ್ರಪ್ಪ, ಎಸ್. ರಾಮು, ಕೆ. ಯಂಕಾರೆಡ್ಡಿ, ಅಶೋಕ ಕುಕನೂರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor