×
Ad

ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿರುವುದು ಸರಿಯಲ್ಲ: ವರಲಕ್ಷ್ಮಿ

ನೌಕರರ ಒಕ್ಕೂಟ-ಹಾಸ್ಟೆಲ್, ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಅನಿರ್ದಿಷ್ಟಾವಧಿ ಧರಣಿ

Update: 2026-05-25 18:20 IST

ಬೆಂಗಳೂರು : ಸಮಾನ ಕೆಲಸಕ್ಕಾಗಿ ನೇಮಕಗೊಂಡಿರುವ ಒಬ್ಬ ನೌಕರನಿಗೆ ಅದಕ್ಕೆ ಸಮಾನವಾದ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸುತ್ತಿರುವ ಮೊತ್ತೊಬ್ಬನಿಗಿಂತ ಕಡಿಮೆ ವೇತನ ನೀಡುವುದು ಕಲ್ಯಾಣ ರಾಜ್ಯದಲ್ಲಿ ಸರಿಯಲ್ಲ ಎಂದು ರಾಜ್ಯ ಸರಕಾರಿ ಖಾಯಂಯೇತರ ನೌಕರರ ಒಕ್ಕೂಟದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಆಕ್ಷೇಪಿಸಿದ್ದಾರೆ.

ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ನೌಕರರ ಒಕ್ಕೂಟ ಹಾಗೂ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಕನಿಷ್ಟ ವೇತನ ಜಾರಿ, ಗುತ್ತಿಗೆ ನೌಕರರ ಖಾಯಂಯಾತಿ ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿರುವುದು ಹೀನಾಯ ಮಾತ್ರವಲ್ಲ, ಅದು ಮನುಷ್ಯ ಘನತೆಯ ತಳಹದಿಯ ಮೇಲೆ ಮಾಡುವ ದಾಳಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ರಾಜ್ಯ ಸರಕಾರ ನೌಕರರ ಬಗ್ಗೆ ಕನಿಷ್ಠ ಬದ್ಧತೆಯನ್ನು ವ್ಯಕ್ತಪಡಿಸುತ್ತಿಲ್ಲ. ವಿವಿಧ ಇಲಾಖೆಗಳಲ್ಲಿ, ನಿಗಮ ಮಂಡಳಿಗಳಲ್ಲಿ, ಯೋಜನೆಗಳಲ್ಲಿ ಲಕ್ಷಾಂತರ ವಿದ್ಯಾವಂತ ಯುವಕ-ಯುವತಿಯರನ್ನು ದೀರ್ಘಕಾಲಿಕವಾಗಿ ದುಡಿಸಲಾಗುತ್ತಿದೆ. ಸರಕಾರ ಇವರನ್ನು ಅಗತ್ಯವಿದ್ದಾಗ ಬಳಸಿ ಬಿಸಾಡುವ ನೀತಿ ಅನುಸರಿಸುತ್ತಿದೆ ಎಂದು ವರಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.

‘ಸಿ ಮತ್ತು ಡಿ' ಗುಂಪಿನ ಹುದ್ದೆಗಳ ಕೆಲಸಗಳನ್ನು ಸಂಪೂರ್ಣವಾಗಿ ಮಧ್ಯವರ್ತಿಗಳ ಮುಖಾಂತರ ದುಡಿಸಿಕೊಳ್ಳುತ್ತಿದೆ. ಈ ನೌಕರರಿಗೆ ಪ್ರತಿ ತಿಂಗಳು ನಿರಂತರವಾಗಿ ವೇತನ ಪಾವತಿಯಾಗುವುದಿಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬಳಿ ಕೇಳಿದರೆ ಗುತ್ತಿಗೆದಾರರ ಮೇಲೆ ಹೇಳುವುದು, ಗುತ್ತಿಗೆದಾರರನ್ನು ಕೇಳಿದರೆ ಅಧಿಕಾರಿಗಳ ಮೇಲೆ ಹೇಳುವುದು ನಡೆಯುತ್ತಿದೆ. ಪ್ರತಿ ವರ್ಷ ಗುತ್ತಿಗೆದಾರರ ಟೆಂಡರ್ ಬದಲಾದಾಗ ಈ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ವರಲಕ್ಷ್ಮಿ ತಿಳಿಸಿದರು.

ಸರಕಾರ ಕೂಡಲೇ ರಾಜ್ಯ ಸಿವಿಲ್ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಖಾಯಂಯೇತರರ ನೌಕರರನ್ನು ಖಾಯಂ ಮಾಡಬೇಕು. ಹುದ್ದೆಗಳನ್ನು ತುಂಬುವಾಗ ಖಾಯಂಯೇತರರ ನೌಕರರಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು. ನೌಕರರನ್ನು ಖಾಯಂ ಮಾಡುವ ತನಕ ನೇರ ವೇತನ ಪಾವತಿಯಡಿ ತರಬೇಕು. ಎಲ್ಲ ಖಾಯಂಯೇತರರ ನೌಕರರಿಗೆ ತಿಂಗಳಿಗೆ ಸರಿಯಾಗಿ ವೇತನ, ಇಎಸ್‍ಐ, ಪಿಎಫ್ ಪಾವತಿಯನ್ನು ಖಾತ್ರಿ ಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಎಲ್ಲ ಖಾಯಂಯೇತರರ ನೌಕರರಿಗೆ ಆರೋಗ್ಯ, ಸಂಜೀವಿನಿ ಮತ್ತು ಮಹಿಳಾ ನೌಕರರಿಗೆ ಮುಟ್ಟಿನ ರಜೆಯನ್ನು ಇಲಾಖಾವಾರು ಪ್ರತ್ಯೇಕ ಆದೇಶ ನೀಡಬೇಕು. ಖಾಯಂ ಮಾಡುವ ತನಕ ಎಲ್ಲರಿಗೂ ಕೆಲಸದ ಭದ್ರತೆಯನ್ನು ಖಾತ್ರಿ ಪಡಿಸಬೇಕು. ಖಾಯಂಯೇತರರ ನೌಕರರನ್ನು ವೇತನ ಆಯೋಗದಡಿ ಪ್ರತ್ಯೇಕ ವರ್ಗವನ್ನು ನಿಗದಿ ಮಾಡಬೇಕು ಎಂದು ವರಲಕ್ಷ್ಮಿ ಆಗ್ರಹಿಸಿದರು.

ಧರಣಿಯಲ್ಲಿ ಖಾಯಂಯೇತರರ ನೌಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಭೀಮಶೆಟ್ಟಿಯಂಪ್ಪಳ್ಳಿ, ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ಹೋರಾಟಗಾರರಾದ ಚಂದ್ರಪ್ಪ, ಸಂತೋಷ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News