Bengaluru | ನಿರ್ಮಲಾ ಸೀತಾರಾಮನ್ ಡೀಪ್‍ಫೇಕ್ ವಿಡಿಯೋ ಬಳಸಿ 6.88 ಲಕ್ಷ ರೂ. ವಂಚನೆ
ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್‍ಫೇಕ್ ವಿಡಿಯೋ ಬಳಸಿಕೊಂಡು ನಗರದ ವ್ಯಕ್ತಿಯೊಬ್ಬರಿಗೆ 6.88 ಲಕ್ಷ ರೂ. ವಂಚನೆ ಮಾಡಲಾಗಿದೆ ಎಂದು ವರದಿಯಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೂಡಿಕೆ ಯೋಜನೆ ಆರಂಭಿಸಿರುವಂತೆ ತೋರಿಸುವ ವಿಡಿಯೋವೊಂದು ನಾರಾಯಣಪುರ ನಿವಾಸಿಯಾದ 66 ವರ್ಷದ ವ್ಯಕ್ತಿಗೆ ಫೇಸ್‍ಬುಕ್‍ನಲ್ಲಿ ಕಾಣಿಸಿಕೊಂಡಿತ್ತು. ಅದರಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಉತ್ತಮ ಲಾಭ ಸಿಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಮಾತನಾಡಿರುವಂತೆ ಡೀಪ್ ಪೇಕ್ ತಂತ್ರಜ್ಞಾನದ ಮೂಲಕ ತೋರಿಸಲಾಗಿತ್ತು.
ವಿಡಿಯೊದಲ್ಲಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿದ ವ್ಯಕ್ತಿ ತನ್ನ ಕೆವೈಸಿ ಸೇರಿದಂತೆ ಅಗತ್ಯ ಮಾಹಿತಿಯನ್ನು ದಾಖಲಿಸಿದ್ದರು. ನಂತರ ವಾಟ್ಸಾಪ್ ಸಂಖ್ಯೆಯಿಂದ ಕರೆ ಬಂದಿದ್ದು, 22 ಸಾವಿರ ರೂ. ಹೂಡಿಕೆಯ ಬದಲು 6 ಲಕ್ಷ ರೂ.ಗಿಂತ ಹೆಚ್ಚು ಹೂಡಿಕೆ ಮಾಡಿದರೆ ಕೇವಲ 10 ದಿನಗಳಲ್ಲಿ 15 ಲಕ್ಷ ರೂ. ವಾಪಸ್ ಸಿಗುತ್ತದೆ ಎಂದು ನಂಬಿಸಲಾಗಿತ್ತು.
ಸರಕಾರಿ ಯೋಜನೆ ಎಂಬ ನಂಬಿಕೆಯಿಂದ ನಾರಾಯಣಪುರ ನಿವಾಸಿಯು ಮಾರ್ಚ್‍ನಿಂದ ಜೂನ್‍ವರೆಗೆ ಒಟ್ಟು 6.88 ಲಕ್ಷ ರೂ. ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆದರೆ ಯಾವುದೇ ಹಣ ಮರಳಿ ಬಾರದ ಹಿನ್ನೆಲೆಯಲ್ಲಿ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.