ಬಿಡಿಎ ಅಧ್ಯಕ್ಷ ಎನ್.ಎ. ಹಾರಿಸ್ ಇತರ ಅಧಿಕಾರಿಗಳ ವಿರುದ್ಧದ ಖಾಸಗಿ ವ್ಯಕ್ತಿ ದಾಖಲಿಸಿದ್ದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Update: 2026-07-18 00:08 IST

ಎನ್.ಎ.‌ ಹಾರೀಸ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಮೆ (ಬಿಡಿಎ) ಸೇರಿದ ಜಾಗದಲ್ಲಿ ನಿರ್ಮಾಣ ಮಾಡಿದ್ದ ಮಳಿಗೆಯನ್ನು ನೆಲಸಮಗೊಳಿಸಿ, ತೆರವುಗೊಂಡ ಜಾಗವನ್ನು ಹರಾಜು ಹಾಕಿದಕ್ಕೆ ಬಿಡಿಎ ಅಧ್ಯಕ್ಷ ಎನ್.ಎ.‌ ಹಾರೀಸ್ ಹಾಗೂ ಆಯುಕ್ತರ ವಿರುದ್ದ ಖಾಸಗಿ ವ್ಯಕ್ತಿ ದಾಖಲಿಸಿದ್ದ ದೂರು ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಎನ್.ಎ. ಹಾರೀಸ್, ಆಯುಕ್ತರು, ಬಿಡಿಎ ಬೆಂಗಳೂರು ಪೂರ್ವ ವಲಯದ ಕಾರ್ಯಕಾರಿ ಇಂಜಿನಿಯರ್, ಸಹಾಯಕ ಕಾರ್ಯಕಾರಿ ಮತ್ತು ಸಹಾಯಕ ಎಂಜಿನಿಯರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಅರ್ಜಿಯಲ್ಲಿ ಮೊದಲನೇ‌ ಪ್ರತಿವಾದಿಯಾದ ಸಯ್ಯದ್ ಇಬ್ರಾಹಿಂ‌ ಎಂಬಾತ ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು‌ ದಾಖಲಿಸಿ, ನೀಲಸಂದ್ರದ ವಿವೇಕ ನಗರದಲ್ಲಿ‌ ತಮಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದ್ದ ಮಳಿಗೆಯನ್ನು ಬಿಡಿಎ ಅಕ್ರಮವಾಗಿ ನೆಲಸಮ ಮಾಡಿದೆ ಎಂದು ಆರೋಪಿಸಿದ್ದರು. ಬಳಿಕ ಜಾಗವನ್ನು ಹರಾಜು ಹಾಕುವುದಾಗಿ ತಿಳಿಸಿ‌ ಬಿಡಿಎ ಹೊರಡಿಸಿದ್ದ ನೋಟಿಸ್ ಪ್ರಶ್ನಿಸಿ‌‌ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಹಿಂಪಡೆದು ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರಿಂದ ಹಿಡಿದು ಕೆಳ‌ಹಂತದ ಅಧಿಕಾರಿಗಳವರೆಗೆ ಎಲ್ಲರನ್ನು ಆರೋಪಿಗಳನ್ನಾಗಿ ಮಾಡಿ ವಿಚಾರಣಾ ನ್ಯಾಯಲಯದ ಖಾಸಗಿ ದೂರು ದಾಖಲಿಸಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಬಿಡಿಎ ಜಾಗದಲ್ಲಿ ದೂರದಾರು ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮಳಿಗೆಯನ್ನು ಅರ್ಜಿದಾರ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಭಾಗವಾಗಿ ನೆಲಸಮ‌ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸದೆ ನೇರವಾಗಿ ದೂರಿನ ಕುರಿತು ಉತ್ತರಿಸುವಂತೆ ಸೂಚಿಸಿ, ವಿಚಾರಣಾ ನ್ಯಾಯಾಲಯ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿದೆ.‌‌ ಈ ಕ್ರಮ ಸರಿಯಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ದೂರುದಾರರೇ ಬಿಡಿಎ ಜಾಗವನ್ನು ಅತಿಕ್ರಮಿಸಿಕೊಂಡು ಮಳಿಗೆ ನಿರ್ಮಿಸಿದ್ದರು. ಬಿಡಿಎ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯ ಭಾಗವಾಗಿ ಆ ಅನಧಿಕೃತ ಮಳಿಗೆಯನ್ನು ತೆರವು ಮಾಡಿ, ಜಾಗವನ್ನು ಹರಾಜು ಹಾಕಿದ್ದಾರೆ. ಹೀಗಿದ್ದರೂ, ಅರ್ಜಿದಾರರ ಮೇಲೆ ಖಾಸಗಿ ದೂರು ದಾಖಲಿಸಿರುವುದು ಕಾನೂನಿನ ಸ್ಪಷ್ಟ ದುರುಪಯೋಗವಾಗಿದೆ. ಈ ದೂರಿನ ವಿಚಾರಣೆ ಮುಂದುವರಿಸಲು ಅನುಮತಿಸಿದರೆ, ಅರ್ಜಿದಾರರಿಗೆ ಅನ್ಯಾಯ ಮಾಡಿದಂತಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ದದ ಖಾಸಗಿ ದೂರಿಗೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸಿ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News