ಬೆಂಗಳೂರು : ನಂದಿನಿ ಹಾಲಿನ ಟ್ಯಾಂಕರ್ ಪಲ್ಟಿಯಾದ ಪರಿಣಾಮ 14 ಸಾವಿರ ಲೀಟರ್ ಹಾಲು ರಸ್ತೆಯಲ್ಲಿ ಹರಿದು ಮಣ್ಣುಪಾಲಾಗಿರುವ ಘಟನೆ ಹೆಬ್ಬಾಳ ಸಮೀಪದ ಸರ್ವೀಸ್ ರಸ್ತೆಯಲ್ಲಿ ನಡೆದಿದ್ದು, ಸ್ಥಳಕ್ಕೆ ಸಂಜಯ್ ನಗರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಚಿಕ್ಕಬಳ್ಳಾಪುರದಿಂದ ಬಮೂಲ್‍ಗೆ ಬರುತ್ತಿದ್ದಾಗ ಹಾಲಿನ ಟ್ಯಾಂಕರ್‍ಗೆ ಬ್ರೇಕ್ ವೈಫಲ್ಯದಿಂದಾಗಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ನಂತರ ಸರ್ವಿಸ್ ರಸ್ತೆಗೆ ಟ್ಯಾಂಕರ್ ಪಲ್ಟಿಯಾಗಿದೆ. ಅಪಘಾತದಲ್ಲಿ ಟ್ಯಾಂಕರ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆಯುವಾಗ ಹಾಲಿನ ಟ್ಯಾಂಕರ್ ಪಕ್ಕದಲ್ಲಿ ಎರಡು ಕಾರುಗಳಿದ್ದರೂ, ಕಾರುಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ರಸ್ತೆಯಲ್ಲಿ ಕೆಲಕಾಲ ವಾಹನ ದಟ್ಟನೆ ಉಂಟಾಗಿತ್ತು. ಸಂಚಾರಿ ಪೊಲೀಸ್ ಸಿಬ್ಬಂದಿ ಪಲ್ಟಿಯಾದ ಟ್ಯಾಂಕರ್ ಅನ್ನು ಕ್ರೇನ್ ಮೂಲಕ ಮೇಲಕ್ಕೆ ಎತ್ತಲು ಹರಸಾಹಸ ಪಡುತ್ತಿದ್ದರೆ, ಸಾರ್ವಜನಿಕರು ಟ್ಯಾಂಕರ್ ನಿಂದ ಹಾಲನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor