ಮೈಸೂರು : ಮಾನಹಾನಿಕರ, ಬೆದರಿಕೆ, ಪ್ರಚೋದನಕಾರಿ ಹಾಗೂ ಕೋಮುಸೂಕ್ಷ್ಮ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಸಂಘ ಪರಿವಾರದ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ಮೈಸೂರಿನ 15 ಮಂದಿ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿ, ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕೆ.ಸಿ. ಶೌಕತ್ ಪಾಷಾ (ಮಾಜಿ ವಿರೋಧ ಪಕ್ಷದ ನಾಯಕ, ಮೈಸೂರು ಮಹಾನಗರ ಪಾಲಿಕೆ), ಅಯೂಬ್ ಖಾನ್ (ಮಾಜಿ ಮೇಯರ್), ಜಿ.ಎನ್. ಮಂಜುನಾಥ್ (ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಸಾಹುಕಾರ್ ಚೆನ್ನಯ್ಯ ಬ್ಲಾಕ್ ಅಧ್ಯಕ್ಷ), ಪುಷ್ಪಲತಾ ಜಗನ್ನಾಥ (ಮಾಜಿ ಮೇಯರ್), ಅನ್ವರ್ ಬೈಗ್ ಅಫ್ತಾಬ್ (ಮಾಜಿ ಮೇಯರ್), ಅಬ್ರಾರ್ ಮುಹಮ್ಮದ್ (ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ), ಎಚ್.ಎಂ. ಶಾಂತಕುಮಾರಿ (ಮಾಜಿ ಉಪಮೇಯರ್), ರಜನಿ ಅನ್ನಯ್ಯ ಸಿ.ಎಸ್. (ಮಾಜಿ ಸದಸ್ಯೆ), ಸಯ್ಯದ್ ಹಸ್ರತ್ ಉಲ್ಲಾ (ಮಾಜಿ ಸದಸ್ಯ), ಜಿ.ಎಸ್. ಸತ್ಯರಾಜ್ (ಮಾಜಿ ಸದಸ್ಯ), ಅಕ್ಮಲ್ ಪಾಷಾ (ಮಾಜಿ ಸದಸ್ಯ), ಪ್ರದೀಪ್ ಚಂದ್ರ (ಮಾಜಿ ಸದಸ್ಯ), ಶ್ರೀಧರ್ ಸಿ. (ಮಾಜಿ ಉಪಮೇಯರ್), ಅಯಾಜ್ ಪಾಷಾ ಪಾಂಡು (ಮಾಜಿ ಸದಸ್ಯ) ಹಾಗೂ ಇಕ್ಬಾಲ್ (ಅಜೀಜ್ ಸೇಠ್ ಬ್ಲಾಕ್ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಮಿತಿ, ಮೈಸೂರು) ದೂರು ಸಲ್ಲಿಸಿದವರಾಗಿದ್ದಾರೆ.

ಆ.25ರಂದು ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಪುನೀತ್ ಕೆರೆಹಳ್ಳಿ ಅವರು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಅವರ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ. ಗೋಮಾಂಸ ಮಾರಾಟ ಮಾಡುತ್ತಿದ್ದರೆನ್ನಲಾದ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡರೆ ಪೊಲೀಸ್ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡುವುದಾಗಿ ಶಾಸಕ ತನ್ವೀರ್ ಸೇಠ್ ಬೆದರಿಕೆ ಹಾಕಿದ್ದರು ಎಂದು ಅವರು ಆರೋಪಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದು ಕೇವಲ ರಾಜಕೀಯ ಟೀಕೆಯಲ್ಲ. ಪೊಲೀಸರ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ, ರಾಜಕೀಯ ಸ್ಥಾನಮಾನದ ದುರ್ಬಳಕೆ ಹಾಗೂ ಅಧಿಕಾರದ ದುರುಪಯೋಗದ ಆರೋಪವಾಗಿದೆ ಎಂದು ದೂರುದಾರರು ಹೇಳಿದ್ದಾರೆ.

ಹೇಳಿಕೆಯ ವಿಷಯ ಮತ್ತು ಅದರ ಮಂಡನೆಯ ರೀತಿಯು ಕೋಮು ಬಣ್ಣ ಪಡೆದುಕೊಳ್ಳುವ ಸಾಧ್ಯತೆಯಿದೆ. ವಿಶೇಷವಾಗಿ ಗೋಮಾಂಸ ಮಾರಾಟಕ್ಕೆ ಸಂಬಂಧಿಸಿದ ಆರೋಪವನ್ನು ಮುಸ್ಲಿಮ್ ಸಮುದಾಯದ ಜನಪ್ರತಿನಿಧಿಯೊಬ್ಬರ ವಿರುದ್ಧ ಮಾಡಿರುವುದರಿಂದ, ಇಂತಹ ಹೇಳಿಕೆಗಳು ವಿವಿಧ ಸಮುದಾಯಗಳ ನಡುವೆ ಅಪನಂಬಿಕೆ ಹಾಗೂ ಉದ್ವಿಗ್ನತೆ ಉಂಟುಮಾಡಿ ಮೈಸೂರಿನ ಶಾಂತಿಯುತ ಸಾಮಾಜಿಕ ವಾತಾವರಣಕ್ಕೆ ಧಕ್ಕೆ ತರಬಹುದೆಂದು ದೂರಿನಲ್ಲಿ ತಿಳಿಸಲಾಗಿದೆ.

ಯಾರೂ ಕಾನೂನಿಗಿಂತ ಮೇಲಾಗಿ ಅಥವಾ ಕಾನೂನುಬಾಹಿರವಾಗಿ ಸ್ವಯಂ ಅಧಿಕಾರ ವಹಿಸಿಕೊಂಡು ವರ್ತಿಸಲು ಸಾಧ್ಯವಿಲ್ಲ. ಯಾವುದೇ ಅಕ್ರಮದ ಬಗ್ಗೆ ದೂರು ಅಥವಾ ಆರೋಪವಿದ್ದರೆ ಸಂಬಂಧಪಟ್ಟ ಸಮರ್ಥ ಅಧಿಕಾರಿಗಳನ್ನು ಸಂಪರ್ಕಿಸಬೇಕು; ಸಾರ್ವಜನಿಕ ಬೆದರಿಕೆ, ಕಾನೂನನ್ನು ಕೈಗೆತ್ತಿಕೊಳ್ಳುವ ರೀತಿಯ ವರ್ತನೆ ಅಥವಾ ಜನಾಭಿಪ್ರಾಯವನ್ನು ಪ್ರಚೋದಿಸುವ ಪ್ರಯತ್ನಗಳಿಗೆ ಮುಂದಾಗಬಾರದು ಎಂದು ಅವರು ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor