ಬೆಂಗಳೂರು: ರಾಜ್ಯಾದ್ಯಂತ ನಾಳೆ (ಆ.26)ಯಿಂದ ಸೆ.6ರ ವರೆಗೆ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ಅವರ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ತಿಳಿಸಿದೆ.

ಮಂಗಳವಾರ ನಗರದ ದಾರುಸ್ಸಲಾಂ ಕಟ್ಟಡದಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್‍ನ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ, ಪ್ರವಾದಿಯವರ ಬದುಕು ಮತ್ತು ಸಂದೇಶಗಳನ್ನು ರಾಜ್ಯದ ಜನರಿಗೆ ತಿಳಿಸಲು 11 ದಿನಗಳ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ಅಭಿಯಾನದಲ್ಲಿ ಪ್ರವಾದಿ ಅವರು ಜಗತ್ತಿನಲ್ಲಿ ತಂದ ಸಮಗ್ರವಾದ ಕ್ರಾಂತಿ. ಆ ಕ್ರಾಂತಿ ಓದು ಎಂಬ ಆದೇಶದೊಂದಿಗೆ ಪ್ರಾರಂಭವಾಗುತ್ತದೆ. ಅದು ವೈಚಾರಿಕ ಕ್ರಾಂತಿ. ಮಾನವ ಬದುಕಿನ ಎಲ್ಲ ಕ್ಷೇತ್ರಗಳನ್ನು ಬದಲಾಯಿಸಿದ ಸಮಗ್ರ ಕ್ರಾಂತಿಯಾಗಿತ್ತು. ಈ ಅಭಿಯಾನದಲ್ಲಿ ಯೋಗೇಶ್ ಮಾಸ್ಟರ್ ಅವರ ʼಮನದೊಡೆಯ ಮಹಮ್ಮದ್ʼ ಹಾಗೂ ಎ.ಎಸ್.ಪುತ್ತಿಗೆ ಅವರು ಬರೆದ ʼಸಮಗ್ರ ಕ್ರಾಂತಿಯ ಬೆಳಗಿದ ಪ್ರವಾದಿ ಮಹಮ್ಮದ್ʼ ಎಂಬ ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುತ್ತದೆ ಎಂದರು.

ಸೆ.26ರಂದು ಜೆ.ಪಿ.ಪಾರ್ಕ್ ಆಟದ ಮೈದಾನದಲ್ಲಿ ಬೃಹತ್ ಪ್ರವಾದಿ ಸಂದೇಶ ಸಮಾವೇಶ ಆಯೋಜಿಸಲಾಯಿದೆ. ಅಂದು ಬೆಳಗ್ಗೆ 11ಗಂಟೆಯಿಂದ ಪುಸ್ತಕ ಮೇಳ ಮತ್ತು ಪ್ರವಾದಿ ಸಂದೇಶ ವಸ್ತು ಪ್ರದರ್ಶನ, ಸಂಜೆ 7ಗಂಟೆಗೆ ಸಾರ್ವಜನಿಕ ಸಮ್ಮೇಳನದ ನಡೆಯಲಿದೆ ಎಂದರು.

ಅಭಿಯಾನದ ಸಂದರ್ಭದಲ್ಲಿ ವಿಚಾರ ಗೋಷ್ಠಿಗಳು, ಸಾರ್ವಜನಿಕ ಸಮಾವೇಶ, ಪ್ರಬಂಧ ಸ್ಪರ್ಧೆ, ಸಂವಾದ ಕಾರ್ಯಕ್ರಮ, ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಸಮಾಜದಲ್ಲಿ ತಾಂಡವವಾಡುತ್ತಿರುವ ಅಕ್ರಮ, ಹಿಂಸೆ, ದೌರ್ಜನ್ಯ, ಅಸಮಾನತೆ, ಅನ್ಯಾಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಇಂಥಹ ಸ್ಥಿತಿಯಲ್ಲಿ ಪ್ರವಾದಿಗಳ ಸಂದೇಶಗಳು ಎಷ್ಟು ಪ್ರಸ್ತುತ ಎನ್ನುವುದನ್ನು ಜನರಿಗೆ ತಿಳಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಲೇಖಕ ಯೋಗೇಶ್ ಮಾಸ್ಟರ್ ಮಾತನಾಡಿ, ಎಲ್ಲರಿಗೂ ಇರುವುದು ಧಾರ್ಮಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಸಮಸ್ಯೆ ಅಲ್ಲ. ಮಾನಸಿಕ ಸಮಸ್ಯೆಯಿದೆ. ಯಾವ ಧರ್ಮದವರಾದರೂ ಕೂಡ ಹೊಡೆದಾಡುತ್ತಿದ್ದಾರೆಂದರೆ ಅದು ಧರ್ಮದ ಸಮಸ್ಯೆ ಅಲ್ಲ. ಅವರವರ ಮಾನಸಿಕ ಸಮಸ್ಯೆ ಎಂದು ಹೇಳಿದರು.

ಪ್ರವಾದಿ ಮುಹಮ್ಮದ್ ಮಾನಸಿಕ ಜಾಗೃತಿಯನ್ನು ಉಂಟು ಮಾಡಿದವರು. ನಮ್ಮ ಭಾವನಾತ್ಮಕ ಅಗತ್ಯವನ್ನು ಪೂರೈಸಿಕೊಳ್ಳಲು ಯಾವ ಬಗೆಯ ದಾರಿಯನ್ನು ತೋರಿದ್ದಾರೆ ಎನ್ನುವ ಅನ್ವಷಣೆಯೇ ಮಾನವ ಮನಸಿನ ಕೃಷಿಕ ಮನದೊಡೆಯ ಮುಹಮ್ಮದ್ ಕೃತಿಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಎ.ಎಸ್.ಪುತ್ತಿಗೆ ಅವರ ಸಮಗ್ರ ಕ್ರಾಂತಿ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ) ಕೃತಿ ಹಾಗೂ ಯೋಗೇಶ್ ಮಾಸ್ಟರ್ ಅವರ ಮಾನವ ಮನಸ್ಸಿನ ಕೃಷಿಕ ಮನದೊಡೆಯ ಮುಹಮ್ಮದ್(ಸ) ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್‍ನ ರಾಜ್ಯಾಧ್ಯಕ್ಷ ಡಾ.ಮಹಮ್ಮದ್ ಸಾದ್ ಬೆಳ್ಗಾಮಿ, ರಾಜ್ಯ ಕಾರ್ಯದರ್ಶಿ ಲಬೀದ್ ಶಾಫಿ, ಯೂಸೂಫ್ ಕನ್ನಿ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor