ಬೆಂಗಳೂರು : ಹೊಸ ತಂತ್ರಜ್ಞಾನ ಅಭಿವೃದ್ಧಿ, ಸಂಶೋಧನೆ ಮತ್ತು ವಾಣಿಜ್ಯೀಕರಿಸುವ ಜಾಗತಿಕ ನವೀನತೆಯ ತಾಣವಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯೂ (ಟೆಕ್ ಶೃಂಗಸಭೆ-2026) ಮೂರು ದಿನಗಳ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ವಿವಿಧ ಸಂಸ್ಥೆಗಳಿಂದ 1,050 ಕೋಟಿ ರೂ., ಹೂಡಿಕೆಗೆ ನಿರ್ಧಾರ, ಸರಕಾರಿ ಶಾಲೆ, ಪಂಚಾಯತ್‌ಗಳಿಗೂ ಲ್ಯಾಪ್‌ಟಾಪ್ ವಿವರಣೆ ಸಹಿತ ಹಲವು ಸಾಧನೆಗಳಿಗೆ ಸಾಕ್ಷಿಯಾಗಿದೆ.

ಮೂರು ದಿನಗಳವರೆಗೆ ನಡೆದ ಸಮಾವೇಶವು ಗುರುವಾರ ಇಲ್ಲಿ ಹಲವು ಹೊಸ ಸಾಧನೆಗಳ ಮೂಲಕ ಸಮಾರೋಪಗೊಂಡಿತು.

ಸಮಾವೇಶದ ಯಶಸ್ಸಿನ ಕುರಿತು ಮಾತನಾಡಿದ ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕವು ತಂತ್ರಜ್ಞಾನ ಸೇವೆಗಳ ಕೇಂದ್ರ ಎಂಬ ತನ್ನ ಸಾಂಪ್ರದಾಯಿಕ ಗುರುತನ್ನು ಮೀರಿ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ, ಸಂಶೋಧನೆ ಮತ್ತು ವಾಣಿಜ್ಯೀಕರಣದ ಜಾಗತಿಕ ತಾಣವಾಗಿ ಬೆಳೆಯುತ್ತಿದೆ ಎಂದರು.

ಬೆಂಗಳೂರು ಟೆಕ್ ಶೃಂಗಸಭೆ ಕೇವಲ ವಾರ್ಷಿಕ ತಂತ್ರಜ್ಞಾನ ಸಮಾವೇಶವಾಗಿ ಉಳಿದಿಲ್ಲ. ಜಾಗತಿಕ ಚರ್ಚೆಗಳು ಸಹಭಾಗಿತ್ವ, ಹೂಡಿಕೆ ಮತ್ತು ನೈಜ ಅವಕಾಶಗಳಾಗಿ ಪರಿವರ್ತನೆಯಾಗುವ ವೇದಿಕೆಯಾಗಿ ಬೆಳೆದಿದೆ. ಜಾಗತಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಯು ಭಾರತದೊಂದಿಗೆ ಸಂಪರ್ಕ ಸಾಧಿಸಲು ಬೆಂಗಳೂರನ್ನು ಪ್ರವೇಶದ್ವಾರವನ್ನಾಗಿ ರೂಪಿಸುವುದು ನಮ್ಮ ಗುರಿ. ಅದೇ ವೇಳೆ, ಕರ್ನಾಟಕದ ನವೀನತೆ ಮತ್ತು ಪರಿಹಾರಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ ಎಂದೂ ಅವರು ತಿಳಿಸಿದರು.

ರಾಜ್ಯದ ಜಾಗತಿಕ ತಂತ್ರಜ್ಞಾನ ನಾಯಕತ್ವಕ್ಕೆ ಹೊಸ ಆಯಾಮ ಸಮಾವೇಶವು ಕೇವಲ ತಂತ್ರಜ್ಞಾನ ಪ್ರದರ್ಶನಕ್ಕೆ ಸೀಮಿತವಾಗದೆ, ಕರ್ನಾಟಕದ ನವೀನತೆೆ, ಹೂಡಿಕೆ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಹೊಸ ವೇದಿಕೆಯನ್ನು ಒದಗಿಸುವ ಮೂಲಕ ಮಹತ್ವದ ಯಶಸ್ಸು ದಾಖಲಿಸಿದೆ.

ಡೀಪ್‌ಟೆಕ್ ಕ್ಷೇತ್ರಕ್ಕೆ ಪ್ರಕಟವಾದ 1,050 ಕೋಟಿ ರೂ. ಹೂಡಿಕೆ, ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಕರ್ನಾಟಕದ ಶೇ.51ರಷ್ಟು ಪಾಲು ಹಾಗೂ ವಿವಿಧ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದಗಳು ರಾಜ್ಯದ ತಂತ್ರಜ್ಞಾನ ಸಾಮರ್ಥ್ಯಕ್ಕೆ ಜಾಗತಿಕ ಮನ್ನಣೆ ದೊರೆಯುತ್ತಿರುವುದನ್ನು ಪ್ರತಿಬಿಂಬಿಸುತ್ತವೆ.

ಎಐ, ಜೈವಿಕ ತಂತ್ರಜ್ಞಾನ, ಡ್ರೋನ್, ಕ್ರೀಡಾ ತಂತ್ರಜ್ಞಾನ ಮತ್ತು ಸೈಬರ್ ಸುರಕ್ಷತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆ, ಉದ್ಯಮಶೀಲತೆ ಮತ್ತು ಹೂಡಿಕೆಗೆ ಅವಕಾಶಗಳು ಸೃಷ್ಟಿಯಾಗಲಿವೆ. ವಿಶೇಷವಾಗಿ ಬೆಂಗಳೂರಿನ ಆಚೆಗೂ ಎಐ ಕೌಶಲ, ಸ್ಟಾರ್ಟ್‌ಅಪ್ ಚಟುವಟಿಕೆ ಮತ್ತು ತಂತ್ರಜ್ಞಾನ ಮೂಲಸೌಕರ್ಯ ವಿಸ್ತರಿಸುವ ಪ್ರಯತ್ನಗಳು ರಾಜ್ಯದ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ನೆರವು ನೀಡಲಿದೆ.

ರಾಜ್ಯದ ವಿದ್ಯುನ್ಮಾನ, ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ಈ ಸಮಾವೇಶದಲ್ಲಿ 64 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಕರ್ನಾಟಕವು ತಂತ್ರಜ್ಞಾನ ಸೇವೆಗಳ ಕೇಂದ್ರ ಎಂಬ ತನ್ನ ಸಾಂಪ್ರದಾಯಿಕ ಗುರುತನ್ನು ಮೀರಿ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ, ಸಂಶೋಧನೆ ಮತ್ತು ವಾಣಿಜ್ಯೀಕರಣದ ಜಾಗತಿಕ ತಾಣವಾಗಿ ಬೆಳೆಯುತ್ತಿರುವುದಕ್ಕೆ ಸಮಾವೇಶದ ಯಶಸ್ಸು ಸಾಕ್ಷಿಯಾಗಿದೆ.

-ಪ್ರಿಯಾಂಕ್ ಖರ್ಗೆ, ಐಟಿ, ಬಿಟಿ ಸಚಿವ

ಎಐ ಕೌಶಲ ಅಭಿವೃದ್ಧಿ ಉಪಕ್ರಮ

ಸೋಲ್‌ಏಸ್ ಸಹಯೋಗದಲ್ಲಿ ಬಳಕೆಯಲ್ಲಿಲ್ಲದ ಕಾರ್ಪೊರೇಟ್ ಕಂಪೆನಿಗಳ ಲ್ಯಾಪ್‌ಟಾಪ್‌ಗಳನ್ನು ನವೀಕರಿಸಿ ಸರಕಾರಿ ಶಾಲೆಗಳು, ಪಂಚಾಯತ್‌ಗಳು ಮತ್ತು ಕಚೇರಿಗಳಿಗೆ ಒದಗಿಸುವ ಡಿಜಿಟಲ್ ಸೇರ್ಪಡೆ ಕಾರ್ಯಕ್ರಮ ರೂಪಿಸಲಾಗಿದೆ.

ವಿದ್ಯಾರ್ಥಿಗಳು ಮತ್ತು ಇಂಜಿನಿಯರ್‌ಗಳಿಗಾಗಿ 63,200 ಜನರನ್ನು ಗುರಿಯಾಗಿಸಿಕೊಂಡ ಎಐ ಕೌಶಲ ಅಭಿವೃದ್ಧಿ ಉಪಕ್ರಮವನ್ನೂ ಕೈಗೊಳ್ಳಲು ಸಮಾವೇಶದಲ್ಲಿ ನಿರ್ಧರಿಸಲಾಗಿದೆ.

ಸಮಾವೇಶದ ಪ್ರಮುಖ ಸಾಧನೆಗಳು

ಮೂರು ದಿನಗಳ ಸಮಾವೇಶದಲ್ಲಿ 162 ಗೋಷ್ಠಿಗಳು, 24 ದುಂಡುಮೇಜಿನ ಸಭೆಗಳು ಮತ್ತು 704 ಭಾಷಣಕಾರರು ಪಾಲ್ಗೊಂಡಿದ್ದರು. 11,257 ಸಮ್ಮೇಳನ ಪ್ರತಿನಿಧಿಗಳು, 58,872 ನೋಂದಾಯಿತ ಉದ್ಯಮ ಸಂದರ್ಶಕರು ಹಾಗೂ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಒಟ್ಟು 70,129 ಮಂದಿ ಭಾಗವಹಿಸಿದ್ದರು.

104 ನಗರಗಳಿಂದ ಬಂದ 923 ಸ್ಟಾರ್ಟ್‌ಅಪ್‌ಗಳು ಸೇರಿದಂತೆ 1,518 ಪ್ರದರ್ಶಕರು ತಮ್ಮ ಉತ್ಪನ್ನ ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಿದರು.

ಉದ್ಯಮ ಸಂಪರ್ಕಕ್ಕಾಗಿ 938 ನೇರ ಬಿ2ಬಿ ಸಭೆಗಳು ನಡೆದಿದ್ದು, ವಾಟ್ಸ್‌ಆ್ಯಪ್ ಕನೆಕ್ಟ್ ಮೂಲಕ 11,289 ಉದ್ಯಮ ಸಂಪರ್ಕಗಳು ದಾಖಲಾಗಿವೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor