ಸಿಎನ್ಆರ್ ರಾವ್ (Photo credit: PTI)

ಬೆಂಗಳೂರು: ದೇಶದ ಖ್ಯಾತ ವಿಜ್ಞಾನಿಗಳಲ್ಲಿ ಒಬ್ಬರಾದ ಪ್ರೊಫೆಸರ್ ಸಿಎನ್ಆರ್ ರಾವ್ ಅವರಿಗೆ ಎಸ್‌ ಐಆರ್‌ ನೋಟಿಸ್‌ ನೀಡಲಾಗಿದೆ. ಗುರುತನ್ನು ದೃಢಪಡಿಸಲು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಜನಿಸಿದ ಸಿಎನ್ಆರ್ ರಾವ್ ಅವರು ವಿಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪುರಸ್ಕಾರವನ್ನು ಪಡೆದಿರುವ ಅವರು, ಈ ಗೌರವಕ್ಕೆ ಪಾತ್ರರಾದ ಮೂರನೇ ವಿಜ್ಞಾನಿಯಾಗಿದ್ದಾರೆ.

ಪ್ರೊ.ರಾವ್ ಅವರಿಗೆ ನೀಡಿದ ನೋಟಿಸ್‌ನಲ್ಲಿ “ಸ್ವಯಂ ಹೆಸರಿನ ವ್ಯತ್ಯಾಸ”ವನ್ನು ಕಾರಣವೆಂದು ಉಲ್ಲೇಖಿಸಲಾಗಿದೆ. ಪ್ರೊ. ರಾವ್ ಅವರಿಗೆ ಮಲ್ಲೇಶ್ವರಂನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಹಳೆಯ ಮತದಾರರ ಪಟ್ಟಿಗಳಲ್ಲಿ ಅವರ ಹೆಸರು ಪ್ರೊ. ಸಿಎನ್ಆರ್ ರಾವ್ ಎಂದು ನಮೂದಿಸಲಾಗಿತ್ತು, ಆದರೆ ಹೊಸ ಮತದಾರರ ಪಟ್ಟಿಯಲ್ಲಿ “Prof” ಪದಕ್ಕೆ ಹೆಚ್ಚುವರಿ “f” ಸೇರಿಸಲಾಗಿದ್ದು, ಅವರ ಹೆಸರನ್ನು “Proff CNR Rao” ಎಂದು ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇದನ್ನು ಆಯೋಗವು “ಸ್ವಯಂ-ಹೊಂದಾಣಿಕೆಯಾಗದ ದೋಷ” ಎಂದು ವರ್ಗೀಕರಿಸಿದೆ. ಈ ತಾಂತ್ರಿಕ ದೋಷವನ್ನು ಸರಿಪಡಿಸಿ, ಗುರುತನ್ನು ದೃಢೀಕರಿಸುವಂತೆ ಆಯೋಗ ನೋಟಿಸ್‌ನಲ್ಲಿ ಸೂಚಿಸಿದೆ.

ಘನ-ಸ್ಥಿತಿ (ಸಾಲಿಡ್ ಸ್ಟೇಟ್) ಮತ್ತು ವಸ್ತು ರಸಾಯನಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಸಿ.ಎನ್.ಆರ್. ರಾವ್ ಅವರಿಗೆ 2014ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಲಾಗಿತ್ತು. ಪ್ರೊ. ರಾವ್ ಅವರು ಭಾರತದ ವಿಜ್ಞಾನ ನೀತಿಗಳನ್ನು ರೂಪಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು. ಬಳಿಕ ರಾಜೀವ್ ಗಾಂಧಿ, ಎಚ್.ಡಿ. ದೇವೇಗೌಡ, ಐ.ಕೆ. ಗುಜ್ರಾಲ್ ಮತ್ತು ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಗಳಾಗಿದ್ದಾಗ ವೈಜ್ಞಾನಿಕ ಸಲಹಾ ಮಂಡಳಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

ಅವರಿಗೆ ಪದ್ಮ ವಿಭೂಷಣ, ಪದ್ಮಶ್ರೀ ಮತ್ತು ಕರ್ನಾಟಕ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor