ಬೆಂಗಳೂರು : ‘ದೇಶದ ಹೋರಾಟಗಾರರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿದರೆ ಅಥವಾ ಕೋಮು ಧ್ರುವೀಕರಣ ಮಾಡಿದರೆ ಬಲಪಂಥೀಯರಿಗೆ ರಾಜಕೀಯ ಲಾಭ ದೊರೆಯುವ ಕಾಲ ಈಗ ಇಲ್ಲ’ ಎಂದು ಜೆಎನ್‍ಯು ವಿದ್ಯಾರ್ಥಿ ಸಂಘಟನೆಯ ಜಂಟಿ ಕಾರ್ಯದರ್ಶಿ ದಾನಿಶ್ ಅಲಿ ಹೇಳಿದ್ದಾರೆ.

ಶನಿವಾರ ಸಂಜೆ ನಗರದ ಆರ್ಶೀವಾದ್ ಕಟ್ಟಡದ ಲೋಯೋಲಾ ಸಭಾಂಗಣದಲ್ಲಿ ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ತನೆ ಹುತಾತ್ಮ ದಿನಾಚರಣೆ ನೆನಪಿನಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್(ಎಐಎಸ್‍ಎ) ಕರ್ನಾಟಕ ಘಟಕ ಆಯೋಜಿಸಿದ್ದ ‘ಕ್ಯಾಂಪಸ್ ಗಳಿಂದ ಬೀದಿಗಳ ವರೆಗೆ ಪ್ರಜಾಪ್ರಭುತ್ವಕ್ಕೆ ಕುತ್ತು?' ವಿಷಯ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಪ್ರಗತಿಪರರನ್ನು ಗುರಿಯಾಗಿಸಿಕೊಂಡು ಉಗ್ರರು ಎನ್ನುವ ಹಣೆಪಟ್ಟಿ ಕಟ್ಟಲಾಗುತ್ತಿದೆ. ಹೋರಾಟಗಾರರನ್ನೂ ಉದ್ದೇಶ ಪೂರಕವಾಗಿ ಪೊಲೀಸ್ ಪ್ರಕರಣಗಳಲ್ಲಿ ಸಿಲುಕಿಸುವ ಕೆಲಸ ಮತ್ತೊಂದು ಕಡೆ ಸಾಗಿದೆ. ಇತ್ತ ಧರ್ಮ, ಧರ್ಮಗಳ ನಡುವೆ ವಿವಾದ ಸೃಷ್ಟಿಸುವ, ಕೋಮು ಧ್ರುವೀಕರಣ ಮಾಡುವ ಕೆಲಸವೂ ಕಳೆದ 12 ವರ್ಷಗಳಿಂದ ನಿರಂತರ ನಡೆಯುತ್ತಿದೆ. ಆದರೆ, ಇಂತಹ ಚಟವಟಿಕೆಗಳಿಂದ ಕೇಂದ್ರ ಸರಕಾರಕ್ಕೆ, ಬಲಪಂಥೀಯರಿಗೆ ರಾಜಕೀಯ ಲಾಭ ದೊರೆಯುವ ಕಾಲ ಈಗಿಲ್ಲ. ದೇಶದ ಜನ, ಯುವ ಪೀಳಿಗೆ ಎಚ್ಚೆತ್ತುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರದ ಶಿಕ್ಷಣ ಸಚಿವರ ರಾಜೀನಾಮೆ, ಹೊಸದಿಲ್ಲಿಯ ಜಂತರ್ ಮಂತರ್ ಹೋರಾಟವೂ ಕೇವಲ ಸಿಜೆಪಿ ಪಕ್ಷದ ಜಯ ಮಾತ್ರವಲ್ಲ. ಬದಲಾಗಿ ಇದು ಜನಶಕ್ತಿಗೆ ಬಂದಿರುವ ಫಲಿತಾಂಶ. ಸಾರ್ವಜನಿಕರು ತಿರುಗಿಬಿದ್ದರೆ ಸರಕಾರಗಳು ಕೆಳಗೆ ಬೀಳಲಿವೆ ಎನ್ನುವುದಕ್ಕೆ ಇದೊಂದು ಬೆಳವಣಿಗೆ ತಾಜಾ ಉದಾಹರಣೆ ಎಂದೇ ಹೇಳಬಹುದು. ಆ ಸಚಿವರ ರಾಜೀನಾಮೆಯಿಂದ ಶಿಕ್ಷಣ ವ್ಯವಸ್ಥೆ ಬದಲಾಗಿದೆ ಎಂದು ಹೇಳಲು ಬರುವುದಿಲ್ಲ. ಆದರೆ, ಎಲ್ಲೂ ಒಂದು ಕಡೆ ಪರಿಣಾಮ ಬೀರಿದೆ. ಹಂತ ಹಂತವಾಗಿ ಸುಧಾರಣೆಯೂ ಆಗಲಿದೆ ಎನ್ನುವ ವಿಶ್ವಾಸ ಜನರಲ್ಲಿ ಬಂದಿದೆ ಎಂದು ಅವರು ಹೇಳಿದರು.

ಶಿಕ್ಷಣ ಸುಧಾರಣೆಗೆ ವಿದ್ಯಾರ್ಥಿ ಸಂಘಟನೆಗಳು, ಹೋರಾಟಗಾರರ ಪಣ ತೊಟ್ಟಿದ್ದಾರೆ. ಆದರೆ, ಬಲಪಂಥೀಯ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡಿರುವ ರಾಜ್ಯ ಸರಕಾರಗಳು ನಮ್ಮನ್ನು ಉದ್ದೇಶ ಪೂರಕವಾಗಿ ಗುರಿಯಾಗಿಸಿಕೊಂಡಿವೆ. ಕೆಲವೊಂದು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕುರಿತು ಬೆಳಕು ಚೆಲ್ಲಲು ಪ್ರಯತ್ನ ಮಾಡಿದ ನನ್ನ ವಿರುದ್ಧವೇ ಐದು ಎಫ್‍ಐಆರ್‌ ಗಳನ್ನು ದಾಖಲು ಮಾಡಲಾಗಿದೆ. ಆದರೆ, ನಾವು ಇದಕ್ಕೆ ಹೆದರುವುದಿಲ್ಲ. ಕೊನೆಕ್ಷಣದವರೆಗೂ ಹೋರಾಟ ಮಾಡುತ್ತೇವೆ ಎಂದ ಅವರು, ಕರ್ನಾಟಕ ರಾಜ್ಯದಲ್ಲೂ ಕೆಲ ಶಾಲೆಗಳು ದುಸ್ಥಿತಿಗೆ ತಲುಪಿವೆ. ಇಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ, ಶಿಕ್ಷಣ ಕ್ರಾಂತಿ ಜರುಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಖಂಡನೀಯ. ಇಂದಿಗೆ ಅವರ ಹತ್ಯೆಯಾಗಿ ಒಂಭತ್ತು ವರ್ಷಗಳು ಕಳೆದಿವೆ. ಆದರೆ, ಅವರ ವಿಚಾರಗಳು ಈಗಲೂ ಜೀವಂತವಾಗಿವೆ. ಗೌರಿ ಲಂಕೇಶ್ ಸಹ ಜೆಎನ್‍ಯು ಹೋರಾಟಗಳಿಗೆ ಮುಕ್ತವಾಗಿ ಬೆಂಬಲ ನೀಡುತ್ತಿದ್ದರು. ಅವರು ಕಂಡ ಕನಸಿನಂತೆ ಸಾಮಾನ್ಯ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರು ದನಿಗೂಡಿಸಬೇಕು. ಜತೆಗೆ, ವಿಶ್ವವಿದ್ಯಾಲಯಗಳು ಖಾಸಗೀಕರಣ ಆಗದಂತೆ ತಡೆಯಬೇಕು. ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಕೊಳಿಸುವ ಚಟವಟಿಕೆಗಳನ್ನು ನಡೆಸಬೇಕು ಎಂದು ದಾನಿಶ್ ಆಲಿ ಒತ್ತಾಯಿಸಿದರು.

ಸಂವಾದದಲ್ಲಿ ಬಲಪಂಥೀಯ ಶಿಕ್ಷಣ ವ್ಯವಸ್ಥೆ ಕುರಿತು ಬರಹಗಾರ, ಸಮಾಜಶಾಸ್ತ್ರಜ್ಞ ಡಾ.ಸಿ.ಜಿ.ಲಕ್ಷ್ಮೀಪತಿ ಮಾತನಾಡಿದರು. ಕವಿ ಮೀನಾ ಕಂದಸಾಮಿ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor