ಬೀದಿ ಬದಿ ವ್ಯಾಪಾರಿಗಳ ತೆರವು: ನಾಳೆ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ: ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ
ಸಾಂದರ್ಭಿಕ ಚಿತ್ರ
ಬೆಂಗಳೂರು : ಬೀದಿ ಬದಿ ವ್ಯಾಪಾರ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂಬ ಸರಕಾರದ ನಿರ್ಧಾರ ತೀವ್ರ ನಿರಾಶೆ ಉಂಟುಮಾಡಿದೆ. ಆದ್ದರಿಂದ ಜು.10ರಂದು ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ತಿಳಿಸಿದೆ.
ಈ ಕುರಿತು ಪ್ರಕಟನೆ ನೀಡಿರುವ ಹೋರಾಟ ಸಮಿತಿ, ಜು.8ರಂದು ನಡೆದ ಬೃಹತ್ ಹೋರಾಟದ ಹಿನ್ನಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಬೀದಿ ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನೆಡೆಸಿದ್ದು, ಎಲ್ಲ ವ್ಯಾಪಾರಿಗಳನ್ನು ಒಳಗೊಳ್ಳುವ ಮರು ಸಮೀಕ್ಷೆ ನಡೆಸಲು ಹಾಗೂ ತಕ್ಷಣ ‘ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿ’ ರಚಿಸಲು ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದೆ.
ತೆರವು ಕಾರ್ಯಾಚಾರಣೆ ನಿಲ್ಲಿಸುವುದಿಲ್ಲ ಹಾಗೂ ಮುಖ್ಯ ರಸ್ತೆ, ರಸ್ತೆ ಬದಿಯಲ್ಲೂ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂಬ ಸರಕಾರದ ನಿಲುವಿಗೆ ನಮ್ಮ ವಿರೋಧವಿದೆ. ಬೀದಿ ವ್ಯಾಪಾರ ಮಾಡುವುದು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದೆ.
ಬೀದಿ ವ್ಯಾಪಾರಿಗಳ ಹಕ್ಕುಗಳು ಮತ್ತು ಪಾದಚಾರಿಗಳ ಹಕ್ಕುಗಳನ್ನು ಪರಸ್ಪರ ಸಮನ್ವಯಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿರುವುದನ್ನು ನಾವು ಸಚಿವರಿಗೆ ವಿವರಿಸಿ, ಸಂಬಂಧಿತ ಎಲ್ಲಾ ತೀರ್ಪುಗಳ ಪ್ರತಿಗಳನ್ನು ಅವರಿಗೆ ಸಲ್ಲಿಸಿದ್ದೇವೆ ಎಂದು ತಿಳಿಸಿದೆ.
ಬೀದಿ ವ್ಯಾಪಾರಿಗಳು ಪಾದಚಾರಿಗಳ ವಿರುದ್ಧ ಇಲ್ಲ ಎಂಬುದನ್ನು ಹಾಗೂ ಬೀದಿ ವ್ಯಾಪಾರಿಗಳ ಮತ್ತು ಪಾದಚಾರಿಗಳ ಹಕ್ಕುಗಳ ನಡುವೆ ಸಮತೋಲನ ಸಾಧಿಸಲು ಸರಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಬಯಸುತ್ತೇವೆ ಎಂಬುದನ್ನೂ ಸ್ಪಷ್ಟವಾಗಿ ತಿಳಿಸಿದ್ದೇವೆ. ಸಚಿವರು ಸ್ಥಳಾಂತರ ಮಾತ್ರ ಮಾಡಲಾಗುತ್ತಿದೆ, ತೆರವುಗೊಳಿಸುವಿಕೆ ನಡೆಯುತ್ತಿಲ್ಲ ಎಂದು ಹೇಳುತ್ತಿರುವಾಗ, ನೆಲಮಟ್ಟದಲ್ಲಿ ಅಧಿಕಾರಿಗಳು ಕೇವಲ ತೆರವುಗೊಳಿಸುವ ಕಾರ್ಯವನ್ನೇ ನಡೆಸುತ್ತಿದ್ದಾರೆ ಎಂಬುದನ್ನೂ ನಾವು ಸಚಿವರ ಗಮನಕ್ಕೆ ತಂದೆವು ಎಂದು ತಿಳಿಸಿದೆ.
ಮಲ್ಲೇಶ್ವರಂ, ವೈಟ್‍ಫೀಲ್ಡ್, ನಿಮ್ಹಾನ್ಸ್ ಹಿಂಬಾಗಿಲು, ಚಂದ್ರ ಲೇಔಟ್ ಹಾಗೂ ಇಂದಿರಾನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದ್ದು, ಯಾವುದೇ ಸ್ಥಳಾಂತರ ಮಾಡಿಲ್ಲ. ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು. 2024ರ ಸಮೀಕ್ಷೆಯಲ್ಲಿ ಹೊರಗುಳಿದವರನ್ನೂ ಒಳಗೊಂಡಂತೆ ಸಮಗ್ರ ಮರುಸಮೀಕ್ಷೆ ನಡೆಸಿ, ಎಲ್ಲ ಅರ್ಹ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ವ್ಯಾಪಾರ ಪ್ರಮಾಣಪತ್ರಗಳನ್ನು ನೀಡಬೇಕು ಎಂದು ಸಮಿತಿ ಆಗ್ರಹಿಸಿದೆ.
ಸಮೀಕ್ಷೆಯಲ್ಲಿ ಹೆಸರು ಸೇರಿಸಲು ಕರ್ನಾಟಕದ ಪಡಿತರ ಚೀಟಿ (ರೇಷನ್ ಕಾರ್ಡ್) ಕಡ್ಡಾಯವಾಗಬಾರದು. ಅದರ ಬದಲಾಗಿ ಆಧಾರ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಚಾಲನೆ ಪರವಾನಿಗೆ ಸೇರಿದಂತೆ ಕರ್ನಾಟಕದ ಯಾವುದೇ ಒಂದು ಮಾನ್ಯ ದಾಖಲೆಯನ್ನು ಆಧಾರವಾಗಿಸಿಕೊಂಡು ವ್ಯಾಪಾರಿಗಳನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದೆ.