ಕರ್ನಾಟಕದಲ್ಲಿ ಬರ ಪರಿಸ್ಥಿತಿ | ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಆರ್ಥಿಕ ನೆರವು ನೀಡಿ : ಪ್ರಧಾನಿ ಮೋದಿಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ಪತ್ರ
ಡಾ.ಜಿ.ಪರಮೇಶ್ವರ್, ಪ್ರಧಾನಿ ಮೋದಿ
ಬೆಂಗಳೂರು : ಕರ್ನಾಟಕವು ತೀವ್ರ ಮಳೆಯ ಕೊರತೆಯಿಂದಾಗಿ ಸೃಷ್ಟಿಯಾಗಿರುವ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕು. ಜೊತೆಗೆ ರಾಜ್ಯಕ್ಕೆ ವಿಶೇಷ ಆರ್ಥಿಕ ನೆರವನ್ನು ನೀಡಬೇಕು ಎಂದು ಕೋರಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಗುರುವಾರ ಪ್ರಧಾನಿ, ಕೇಂದ್ರ ಗೃಹ, ಕೃಷಿ ಸಚಿವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಡಾ.ಪರಮೇಶ್ವರ್ ಅವರು, ಬರವನ್ನು ಮುಂಚಿತವಾಗಿ ಘೋಷಿಸಲು ರಾಜ್ಯಗಳಿಗೆ ಅವಕಾಶ ಕಲ್ಪಿಸಿ, ಬಿತ್ತನೆ ಪೂರ್ಣಗೊಳ್ಳುವವರೆಗೆ ಕಾಯುವ ಷರತ್ತನ್ನು ಸಡಿಲಗೊಳಿಸಿ, ರೈತರಿಗೆ ಸಕಾಲದ ನೆರವು ಒದಗಿಸಬೇಕು. ಬರ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಕೇಂದ್ರ ಸರಕಾರವು ಕರ್ನಾಟಕಕ್ಕೆ ಹೆಚ್ಚುವರಿ ನೆರವನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಶೇ.42ರಷ್ಟು ಮತ್ತು ಜುಲೈನಲ್ಲಿ ಶೇ.34ರಷ್ಟು ಮಳೆ ಕೊರತೆಯಾಗಿದ್ದು, ಇದರಿಂದ ವ್ಯಾಪಕ ಬೆಳೆ ನಷ್ಟ, ಅಂತರ್ಜಲ ಮಟ್ಟ ಕುಸಿತ, ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿರುವುದು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಇದು ಜೀವಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ಗಮನ ಸೆಳೆದಿದ್ದಾರೆ.
ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆಯನ್ನು ನಿರ್ಧರಿಸಲು ಹಳೆಯ 2015-16ರ ಕೃಷಿ ಜನಗಣತಿಯ ಬದಲಾಗಿ FRUITS ದತ್ತಾಂಶವನ್ನು ಪರಿಗಣಿಸಬೇಕು. ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದ ಎಸ್‍ಟಿಆರ್‌ಎಫ್/ಎನ್‍ಡಿಆರ್‌ಎಫ್ ಮತ್ತು ಬರ ಕೈಪಿಡಿ-2020ರ ಮಾನದಂಡಗಳನ್ನು ಏಕರೂಪಗೊಳಿಸಿ, ರೈತರಿಗೆ ತ್ವರಿತ ಹಾಗೂ ಸಮಾನ ಪರಿಹಾರ ದೊರೆಯುವಂತೆ ಮಾಡಬೇಕೆಂದು ಅವರು ಕೋರಿದ್ದಾರೆ.
ಬಿತ್ತನೆ ಅವಧಿಯಲ್ಲಿನ ಶೇ.20ರಿಂದ ಶೇ.59ರಷ್ಟು ಮಳೆ ಕೊರತೆಯನ್ನೂ ಬರ ಘೋಷಣೆಗೆ ಮಾನದಂಡವಾಗಿ ಪರಿಗಣಿಸಬೇಕು, ಕೇವಲ ಋತುಮಾನದ ಒಟ್ಟು ಮಳೆಯ ಆಧಾರದ ಮೇಲೆ ಮಾತ್ರ ನಿರ್ಧಾರ ಕೈಗೊಳ್ಳುವ ಪದ್ದತಿಯನ್ನು ಪರಿಷ್ಕರಿಸಬೇಕು. ಒಣಹವೆಯ ವ್ಯಾಖ್ಯಾನವನ್ನು ಸ್ಥಳೀಯ ಕೃಷಿ ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಪರಿಷ್ಕರಿಸಿ, ಅಗತ್ಯವಿದ್ದಲ್ಲಿ ಕಡಿಮೆ ಅವಧಿಯ ಒಣಹವೆಯನ್ನೂ ಪರಿಗಣಿಸಲು ರಾಜ್ಯಗಳಿಗೆ ಅವಕಾಶ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಹಣವನ್ನು ಶೀಘ್ರ ಬಿಡುಗಡೆ ಮಾಡಿ :
ಸೂಪರ್ ಎಲ್‍ನೀನೋ ಹವಾಮಾನ ವೈಪರೀತ್ಯ ಭಾರತದ ಮೇಲೆ ಪರಿಣಾಮ ಬೀರಿದೆ. ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಶೇ.42ರಷ್ಟು ಮತ್ತು ಜುಲೈ ತಿಂಗಳಲ್ಲಿ ಶೇ.34ರಷ್ಟು ಮಳೆ ಕೊರತೆಯಾಗಿದೆ. 245 ತಾಲೂಕುಗಳ ಪೈಕಿ 15 ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. 157 ತಾಲೂಕುಗಳಲ್ಲಿ ಕೊರತೆ, 14 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ ಎಂದು ಡಾ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹಲವು ಜಿಲ್ಲೆಗಳ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಬೆಳಗಾವಿ ವಿಭಾಗದಲ್ಲಿ ಎರಡು ಸಭೆಗಳು, ಕಲಬುರಗಿ ವಿಭಾಗದಲ್ಲಿ ಒಂದು, ಚಿತ್ರದುರ್ಗದಲ್ಲಿ ಒಂದು ಸಭೆ ಮಾಡಿದ್ದೇನೆ. ಮತ್ತೊಮ್ಮೆ ಸಿಎಂ ಜತೆ ಪರಿಶೀಲನಾ ಸಭೆ ನಡೆಸಲಾಗುವುದು. ಉಳಿದ ಸಚಿವರುಗಳೂ ನಿರಂತರವಾಗಿ ಮಳೆ, ಬೆಳೆ, ಜನ ಜಾನುವಾರುಗಳಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಅವಶ್ಯಕತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ಬರ ನಿರ್ವಹಣೆಗೆ ರಾಜ್ಯ ಸರಕಾರ ಹಿಂದು-ಮುಂದು ನೋಡಿಲ್ಲ, ನೋಡುವುದು ಇಲ್ಲ. ಈಗಾಗಲೇ ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ 5ಕೋಟಿ ರೂ.ನೀಡಲಾಗಿದೆ. ಈ ಹಣವನ್ನು ಕುಡಿಯುವ ನೀರಿಗೆ ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಅಲ್ಲದೆ, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 329 ಕೋಟಿ ರೂ. ಗಳಷ್ಟು ಹಣ ಇದೆ. ನಿರಂತರವಾಗಿ ತಾಲೂಕು ಮತ್ತು ಜಿಲ್ಲೆಗಳಲ್ಲಿ ಟಾಸ್ಕ್‍ಫೋರ್ಸ್/ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.
ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿ, ಜನರು ಗುಳೆ ಹೋಗುವುದನ್ನು ತಪ್ಪಿಸಿ, ಅವರಿಗೆ ಉದ್ಯೋಗ ನೀಡಬೇಕು. ರಾಜ್ಯದಲ್ಲಿ ನೀರಿನ ಸಂಪನ್ಮೂಲಗಳು ಬತ್ತಿ ಹೋಗಿವೆ. ಬರ ಪೀಡಿತ ಎಂದು ತಕ್ಷಣವೇ ಘೋಷಣೆ ಮಾಡಲು ಕೇಂದ್ರ ಸರಕಾರದ ನಿಯಮಗಳಲ್ಲಿ ಕೆಲ ಅಡ್ಡಿಗಳಿವೆ. ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಕೋರಿ ಪ್ರಧಾನಿ, ಕೇಂದ್ರ ಗೃಹ ಹಾಗೂ ಕೃಷಿ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.