ಆ.8, 9ರಂದು ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಪರೀಕ್ಷೆ; ಒಟ್ಟು 18,299 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ

Update: 2026-08-04 21:04 IST

ಬೆಂಗಳೂರು : ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆ.8 ಮತ್ತು 9ರಂದು ಲಿಖಿತ ಪರೀಕ್ಷೆ ನಡೆಸುತ್ತಿದ್ದು, ಈ ಸಲುವಾಗಿ ಸಕಲ ತಯಾರಿಯನ್ನು ಮಾಡಿಕೊಂಡಿದೆ.

ಮಂಗಳವಾರ ನಗರದಲ್ಲಿ ಪರೀಕ್ಷಾ ಸಿದ್ಧತಾ ಸಭೆ ಮಾತನಾಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ, ಪಾರದರ್ಶಕ ಮತ್ತು ನ್ಯಾಯಸಮ್ಮತ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ (4,217) ಆ.8ರಂದು ಮತ್ತು ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ (14,082) ಆ.9ರಂದು ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ವೃಂದದವರಿಗೆ ಕಲಬುರಗಿಯ 10 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ ಬೆಂಗಳೂರಿನ 12, ಹುಬ್ಬಳ್ಳಿಯ 7 ಮತ್ತು ಕಲಬುರಗಿಯ 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದರು.

ಅರ್ಜಿ ಸಲ್ಲಿಸಿರುವ ಒಟ್ಟು 18,299 ಅಭ್ಯರ್ಥಿಗಳ ಪೈಕಿ ಬಿ-ಟೆಕ್ ಬಯೋ ಟೆಕ್ನಾಲಜಿ ಅಭ್ಯರ್ಥಿಗಳು 626 ಮಂದಿ ಇದ್ದಾರೆ. ಬಿಇ ಬಯೋ ಟೆಕ್ನಾಲಜಿ ಅಭ್ಯರ್ಥಿಗಳು 362 ಹಾಗೂ ರಾಯ್ ಟೆಕ್ನಾಲಜಿ ಬಿಎಸ್ ಸಿ ಕೃಷಿ ಪದವೀಧರರು 221 ಮಂದಿ ಇದ್ದಾರೆ ಎಂದು ತಿಳಿಸಿದರು.

ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆ ನಡೆಸಲು ಸೂಚನೆ ನೀಡಿದ್ದು, ಪರೀಕ್ಷೆ ಮುಗಿದ ಕೂಡಲೇ ಓಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕೆಇಎ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಇದುವರೆಗೆ 14 ಸಾವಿರ ಮಂದಿ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಂಡಿದ್ದು, ಉಳಿದ ಅಭ್ಯರ್ಥಿಗಳಿಗೆ ಡೌನ್‍ಲೋಡ್ ಲಿಂಕ್ ಅನ್ನು ವಾಟ್ಸ್‌ ಆಪ್ ಮೂಲಕ ಕಳುಹಿಸಲಾಗಿದೆ ಎಂದು ತಿಳಿಸಿದರು.

ಆ.7ಕ್ಕೆ ನೀಟ್ ನೋಂದಣಿ: ಯುಜಿ ನೀಟ್ ರೋಲ್ ನಂಬರ್ ಜೋಡಣೆ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಆ.7ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಚ್.ಪ್ರಸನ್ನ ತಿಳಿಸಿದ್ದಾರೆ.

ಆ.9ಕ್ಕೆ ಕನ್ನಡ ಪರೀಕ್ಷೆ: ಜು.30ರ ನಂತರ ಕೌನ್ಸೆಲಿಂಗ್‍ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿರುವ ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಆ.5ರಂದು ನಡೆಸಬೇಕಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಆ.9ರಂದು ನಡೆಸಲಾಗುತ್ತದೆ. ಇನ್ನೂ ಕೆಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕೋರಿರುವ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ. ಆ.9ರಂದು ಬೆಳಗ್ಗೆ 11:30ರಿಂದ 12:30ರ ವರೆಗೆ ಪರೀಕ್ಷೆ ನಡೆಯಲಿದೆ. ಎ.15 ಮತ್ತು ಮೇ.23ರಂದು ನಡೆದ ಕನ್ನಡ ಪರೀಕ್ಷೆಗೆ ಗೈರು ಹಾಜರಾದವರು ಕೂಡ ಪರೀಕ್ಷೆಗೆ ಹಾಜರಾಗಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News