×
Ad

ಸಕಲ ಸರಕಾರಿ ಗೌರವಗಳೊಂದಿಗೆ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅಂತ್ಯಕ್ರಿಯೆ

Update: 2026-01-13 21:39 IST

ಬೆಂಗಳೂರು: ದಾರುಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು) ಮುಖ್ಯಸ್ಥ, ಅಮೀರೆ ಶರೀಅತ್ ಕರ್ನಾಟಕ ಶೇಕುಲ್ ಹದೀಸ್ ಹಝ್ರತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ(75)ರವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಮಂಗಳವಾರ ದಾರುಲ್ ಉಲೂಮ್ ಸಬೀಲುರ್ರಶಾದ್ ಆವರಣದಲ್ಲಿ ಸಗೀರ್ ಅಹ್ಮದ್ ಖಾನ್ ರವರ ಜನಾಝ ನಮಾಝ್ ನೇತೃತ್ವವನ್ನು ಅವರ ಹಿರಿಯ ಪುತ್ರ ಖಾರಿ ಮೌಲಾನಾ ಝುಬೇರ್ ಅಹ್ಮದ್ ಖಾನ್ ರಶಾದಿ ವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಆಗಮಿಸಿ ಅಮೀರೆ ಶರೀಅತ್ ಅವರ ಅಂತಿಮ ದರ್ಶನ ಪಡೆದರು.

ರಾಜ್ಯ ಸರಕಾರದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಝಮೀರ್ ಅಹ್ಮದ್ ಖಾನ್, ಕೆ.ಜೆ. ಜಾರ್ಜ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್ ಅಂತಿಮ ನಮನ ಸಲ್ಲಿಸಿದರು.

ಜನಾಝ ನಮಾಝ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರಿಂದ ಯಾವುದೆ ಅಹಿತಕರ ಘಟನೆಗಳು ಆಗದಂತೆ ಪೊಲೀಸ್ ಇಲಾಖೆ ವತಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ನಿನ್ನೆಯಿಂದ ಸಬೀಲುರ್ರಶಾದ್ ಆವರಣದಲ್ಲಿ ಅಂತ್ಯಕ್ರಿಯೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅಲ್ಲದೇ, ನಾಗವಾರ ಮುಖ್ಯರಸ್ತೆ, ಎಚ್.ಬಿ.ಆರ್.ಲೇಔಟ್, ಗೋವಿಂದಪುರ, ಟ್ಯಾನರಿ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

ಜಮೀಯತ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ, ಶಾಸಕ ರಿಝ್ವಾನ್ ಅರ್ಶದ್, ಕೆಪಿಸಿಸಿ ಉಪಾಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್, ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ವೈ.ಸಯೀದ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಸೇರಿದಂತೆ ಅನೇಕ ಗಣ್ಯರು ಜನಾಝ ನಮಾಝ್‍ನಲ್ಲಿ ಪಾಲ್ಗೊಂಡಿದ್ದರು.

‘ಮೌಲಾನಾ ಸಗೀರ್ ಅಹ್ಮದ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದಾಗ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಸಂಜ್ಞೆ ಮೂಲಕ ಅವರು ಮಾತನಾಡುತ್ತಿದ್ದರು. ಅವರ ಅಗಲಿಕೆ ತುಂಬಾ ದುಃಖದ ವಿಚಾರ. 10 ವರ್ಷವಿದ್ದಾಗ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ದಾಖಲಾದ ಅವರು, 65 ವರ್ಷಗಳ ಕಾಲ ಈ ಸಂಸ್ಥೆಯ ಜೊತೆ ಇದ್ದರು. ತುಂಬಾ ಸರಳ ವ್ಯಕ್ತಿತ್ವ, ಮಿತ ಭಾಷಿಕರು. ಸರ್ವ ಧರ್ಮೀಯರಿಂದ ಗೌರವಿಸಲ್ಪಡುತ್ತಿದ್ದ ಮಾರ್ಗದರ್ಶಕರನ್ನು ಸಮುದಾಯ ಕಳೆದುಕೊಂಡಿದೆ. ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದಕ್ಕೆ ಇಲ್ಲಿ ನೆರೆದಿರುವ ಜನಸಾಗರವೇ ಸಾಕ್ಷಿ’

-ಝಮೀರ್ ಅಹ್ಮದ್ ಖಾನ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ

‘ದಾರುಲ್ ಉಲೂಮ್ ಸಬೀಲುರ್ರಶಾದ್ ನಾನು ಪ್ರತಿನಿಧಿಸುವ ಸರ್ವಜ್ಞ ನಗರ ಕ್ಷೇತ್ರದಲ್ಲಿದೆ. ಗುರುಗಳಾದ ಮೌಲಾನಾ ಸಗೀರ್ ಅಹ್ಮದ್ ಸಮಾಜಕ್ಕೆ ಮಾದರಿಯಾಗಿದ್ದರು. ನನಗೂ ಹಲವಾರು ಬಾರಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿತ್ತು. ಪ್ರತಿಯೊಂದು ಚುನಾವಣೆ ಸಂದರ್ಭದಲ್ಲೂ ನಾನು ಇಲ್ಲಿನ ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದೆ. ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಾವು ನಡೆಯೋಣ. ಜಾತ್ಯತೀತ ತತ್ವದಲ್ಲಿ ನಂಬಿಕೆಯಿಟ್ಟಿರುವವರಿಗೆ ಇದೊಂದು ಭಾವೈಕ್ಯತೆಯ ಕೇಂದ್ರವಾಗಿದೆ. ಇಲ್ಲಿ ಶಾಂತಿ, ಸೌಹಾರ್ದತೆಯ ವಾತಾವರಣವಿದೆ’

-ಕೆ.ಜೆ.ಜಾರ್ಜ್, ಇಂಧನ ಸಚಿವ

‘ನನ್ನ ಹಾಗೂ ಮೌಲಾನಾ ಸಗೀರ್ ಅಹ್ಮದ್ ಖಾನ್ ಅವರ ಸಂಬಂಧ ಸುಮಾರು 25 ವರ್ಷದಿಂದ ಹಳೆಯದು. 2001ರಲ್ಲಿ ನಾನು ಮೊದಲ ಬಾರಿಗೆ ಪವಿತ್ರ ಹಜ್ ಯಾತ್ರೆ ಕೈಗೊಂಡಾಗ ಅವರೊಂದಿಗೆ ಹೋಗಿದ್ದೆ. ತುಂಬಾ ಸರಳ, ಮೃದು ಸ್ವಭಾವದ ವ್ಯಕ್ತಿ. ಅವರ ನಿಧನದಿಂದಾಗಿ ಸಮಾಜವು ಒಬ್ಬ ಒಳ್ಳೆಯ ಮಾರ್ಗದರ್ಶಕನನ್ನು ಕಳೆದುಕೊಂಡಿದೆ’

-ತನ್ವೀರ್ ಸೇಠ್, ಶಾಸಕ










 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News