×
Ad

ಥಣಿಸಂದ್ರದ ಒತ್ತುವರಿ ತೆರವು ಪ್ರಕರಣ | ಪರಿಹಾರ ಪಡೆದು ಅಕ್ರಮವಾಗಿ ನಿವೇಶನಗಳ ಮಾರಾಟ : ಬಿಡಿಎ ಸ್ಪಷ್ಟನೆ

Update: 2026-01-09 21:34 IST

ಬೆಂಗಳೂರು : ನಗರದಲ್ಲಿರುವ ಥಣಿಸಂದ್ರದ ಒತ್ತುವರಿ ಭೂಮಿಯನ್ನು ಅರ್ಕಾವತಿ ಲೇಔಟ್‍ಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಪರಿಹಾರವನ್ನು ಪಡೆದ ಭೂಮಾಲಕರು ಅಕ್ರಮವಾಗಿ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ ಗುರುವಾರ(ಜ.8) ಥಣಿಸಂದ್ರದಲ್ಲಿ ಒತ್ತುವರಿಯನ್ನು ತೆರವು ಮಾಡಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಶುಕ್ರವಾರ ಬಿಡಿಎ ಪ್ರಕಟನೆ ಹೊರಡಿಸಿದ್ದು, ಅರ್ಕಾವತಿ ಲೇಔಟ್‍ಗಾಗಿ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ 2003ರ ಫೆ.3ರಂದು ಪೂರ್ವಭಾವಿ ಅಧಿಸೂಚನೆ ಮತ್ತು 2004ರ ಫೆ.23ರಂದು ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಒಂದು ಸುತ್ತಿನ ಒತ್ತುವರಿಯನ್ನು ತೆರವುಗೊಳಿಸಿ, ಆಸ್ತಿ ಒಡೆತನವನ್ನು 2004ರ ನ.10ರಂದು ಪಡೆಯಲಾಗಿದೆ. ಇದಕ್ಕೆ ಭೂಮಾಲಕರು ಪರಿಹಾರವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದೆ.

2014ರಲ್ಲಿ ಈ ಬಗ್ಗೆ ಹೈಕೋರ್ಟ್ ವಿವರವಾದ ಆದೇಶವನ್ನು ಹೊರಡಿಸಿದೆ. 2021ರಲ್ಲಿ ಅರ್ಕಾವತಿ ಲೇಔಟ್‍ಗೆ ಸಂಬಂಧಿಸಿ ಹೈಕೋರ್ಟ್ ಸಾಮಾನ್ಯ ಆದೇಶವನ್ನು ಹೊರಡಿಸಿದೆ. ಇದರ ಹೊರತಾಗಿಯೂ, ಭೂಮಾಲಕರು ಅಕ್ರಮವಾಗಿ ಮತ್ತು ವಂಚಿಸಿ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. 33 ನಿವೇಶನಗಳ ಖರೀದಿದಾರರು ನ್ಯಾಯಾಲಯ ನೇಮಿಸಿದ ಕೇಶವನಾರಾಯಣ ಸಮಿತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದೆ.

ಸಮಿತಿಯು ನೋಟಿಸ್ ನೀಡಿ, ವಿಚಾರಣೆ ನಡೆಸಿ, ಅವು ಅಕ್ರಮ ಎಂದು 2023 ಫೆ.16ರಂದು ಘೋಷಿಸಿ, ಬಿಡಿಎಗೆ ಒಡೆತನ ಪಡೆಯುವಂತೆ ನಿರ್ದೇಶನ ನೀಡಿದೆ. ನಿವೇಶನ ಮಾಲಕರು ಅಕ್ರಮವಾಗಿ ಶೆಡ್‍ಗಳನ್ನು ನಿರ್ಮಿಸಿದ್ದು, ಅಲ್ಲಿ ವಾಸಿಸುತ್ತಿರಲಿಲ್ಲ. ಬದಲಾಗಿ ಶೆಡ್‍ಗಳನ್ನು ಬಾಡಿಗೆಗೆ ನೀಡಿ ಬಾಡಿಗೆ ಪಡೆಯುತ್ತಿದ್ದರು ಎಂದು ಬಿಡಿಎ ಆರೋಪಿಸಿದೆ.

ಹೀಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಪರಿಹಾರವನ್ನೂ ಪಾವತಿಸಲಾಗಿದೆ. ನ್ಯಾಯಾಲಯ ಮತ್ತು ಪರಿಶೀಲನಾ ಸಮಿತಿಯಲ್ಲಿ ಬಿಡಿಎ ಪರವಾಗಿ ವಿಚಾರ ನಿರ್ಧಾರವಾಗಿದೆ. ನಿವೇಶನ ಮಾಲಕರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ. ಭೂ ಮಾಲಕರು ಬಿಡಿಎಗೆ ಸೇರಿದ ಭೂಮಿಯಲ್ಲಿ ಅಕ್ರಮವಾಗಿ ಶೆಡ್‍ಗಳಿಂದ ಬಾಡಿಗೆ ಸಂಗ್ರಹಿಸುತ್ತಿದ್ದ ಬಗ್ಗೆ ಆದೇಶವನ್ನೂ ಹೊರಡಿಸಲಾಗಿದೆ ಎಂದು ಬಿಡಿಎ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News