Aurad | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಆರ್‌ಎಫ್‌ಒ ಮುದಾಸಿರ್

ಸಂತಪೂರ್ ಶಾಲೆಯಲ್ಲಿ ವನಮಹೋತ್ಸವ

Update: 2026-07-19 19:42 IST

ಔರಾದ್ : ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಸರ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಆರ್‌ಎಫ್‌ಒ ಎಂ.ಡಿ. ಮುದಾಸಿರ್ ಹೇಳಿದರು.

ತಾಲೂಕಿನ ಸಂತಪೂರ್ ಗ್ರಾಮದ ದೀಪಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಂದು ಶಾಲೆಯಲ್ಲಿ ಮಕ್ಕಳಿಗೆ ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಶಾಲೆಯ ಮುಖ್ಯಗುರು ಪ್ರೀತಿ ಮಾತನಾಡಿ, ಪರಿಸರವಿಲ್ಲದೆ ಜೀವನ ಅಸಾಧ್ಯ. ಉಸಿರಾಡಲು, ಬದುಕಲು ಪರಿಸರವೇ ಆಧಾರವಾಗಿದ್ದು, ಪ್ರತಿಯೊಬ್ಬರೂ ಸಸಿ ನೆಟ್ಟು ಅದರ ಪೋಷಣೆ ಮಾಡುವ ಮೂಲಕ ಪರಿಸರ ಜಾಗೃತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ನೆಲ, ಜಲ ಮತ್ತು ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ. ಮರಗಳನ್ನು ಕಡಿದು ದೊಡ್ಡ ಪ್ರಮಾಣದಲ್ಲಿ ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳನ್ನು ನಿರ್ಮಿಸುತ್ತಿರುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಎಲ್ಲರೂ ಮರಗಳ ಸಂರಕ್ಷಣೆ ಹಾಗೂ ಹೊಸ ಸಸಿಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ವನಮಹೋತ್ಸವದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಸಸಿಗಳನ್ನು ನೆಡಲಾಯಿತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಸಿರು ಬಣ್ಣದ ಉಡುಪು ಧರಿಸಿ ಹಸಿರುಕರಣದ ಸಂದೇಶ ಸಾರಿದರು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ಕಿರು ನಾಟಕಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಎಎಸ್ಐ ಏಕನಾಥ್, ಶ್ರೀನಾಥ್, ಶಿವಕಾಂತಯ್ಯ ಮಠಪತಿ, ರೇಷ್ಮಾ, ಜನೆತ್, ಇಜ್ಞಾತ್ತಿಯ, ಮಾರಿಯಾ ಹಾಗೂ ಶಾಂತಿ ಸೇರಿದಂತೆ ಮಕ್ಕಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News