Bidar | ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಬೋಧಕರ ಜವಾಬ್ದಾರಿ : ಪ್ರೊ.ಬಿ.ಎಸ್ ಬಿರಾದಾರ್
ಬೀದರ್ : ಶಿಕ್ಷಣಕ್ಕೆ ಅತ್ಯುನ್ನತ ಆದ್ಯತೆ ನೀಡಿ ಮಕ್ಕಳಿಗೆ ಗುಣಮಟ್ಟದ ಬೋಧನೆ ನೀಡುವುದು ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ. ಉತ್ತಮ ಕಲಿಕೆ ಮತ್ತು ಉತ್ತಮ ಬೋಧನೆ ಎಂಬ ಎರಡು ಪ್ರಕ್ರಿಯೆಗಳು ನಿರಂತರವಾಗಿ ಸಾಗಬೇಕು ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ್ ಹೇಳಿದರು.
ನಗರದ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಸ್ಪಷ್ಟ ಗುರಿಯೊಂದಿಗೆ ರೂಪಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮಗಳು ಪ್ರೋತ್ಸಾಹದ ಜೊತೆಗೆ ಮತ್ತಷ್ಟು ಸಾಧನೆಗೆ ಸ್ಪೂರ್ತಿ ನೀಡುತ್ತವೆ. ಉತ್ತಮ ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಅವರನ್ನು ರೂಪಿಸಿದ ಶಿಕ್ಷಕ ವೃಂದ ಅಭಿನಂದನೆಗೆ ಅರ್ಹರು ಎಂದು ಹೇಳಿದರು.
ಗುರಿಯಿಲ್ಲದ ಜೀವನ ದಿಕ್ಕುತೋಚದಂತಾಗುತ್ತದೆ. ಪರಿಶ್ರಮ ಮತ್ತು ಶಿಸ್ತು ಇದ್ದರೆ ಮಾತ್ರ ಯಶಸ್ಸು ಸಾಧ್ಯ. ಯಾರೂ ಹುಟ್ಟಿನಿಂದಲೇ ಪ್ರತಿಭಾವಂತರಾಗಿರುವುದಿಲ್ಲ; ನಿರಂತರ ಪ್ರಯತ್ನವೇ ಸಾಧನೆಯ ಮೂಲಮಂತ್ರವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಪೂರ್ಣಿಮಾ ಜಾರ್ಜ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಓದಿನತ್ತ ಗಮನ ಕಳೆದುಕೊಳ್ಳುತ್ತಿದ್ದಾರೆ. ರೀಲ್ಸ್ ಮತ್ತು ಮೊಬೈಲ್ ವ್ಯಸನದಿಂದ ದೂರವಿದ್ದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಮಾತ್ರ ಜೀವನದಲ್ಲಿ ಉನ್ನತ ಸಾಧನೆ ಸಾಧ್ಯ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಚಂದ್ರಕಾಂತ್ ಶಾಹಬಾದಕರ್, ಶಿವರಾಜ್ ಬಿರಾದಾರ್, ಚಂದ್ರಕಾಂತ್ ಗಂಗಶೆಟ್ಟಿ, ಓಂಪ್ರಕಾಶ್ ದಡ್ಡೆ, ಮಲ್ಲಿಕಾರ್ಜುನ್ ಲದ್ದೆ, ರಮೇಶ್ ಪಾಟೀಲ್, ಪ್ರೇಮನಾಥ್ ಪಂಚಾಳ್, ವಿಜಯಕುಮಾರ್, ಸುಖದೇವ್ ಹಾಗೂ ಜ್ಞಾನಸುಧಾ ಕಾಲೇಜಿನ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿಭಾ ಡಿ. ಅವರು ಸ್ವಾಗತ ಗೀತೆ ಹಾಡಿದರು. ಭಗವಾನ್ ಬಿರಾದಾರ್ ಸ್ವಾಗತಿಸಿದರು. ಶಾಂತಲಾ ಎ.ಎಸ್ ಅವರು ನಿರೂಪಿಸಿದರು. ಶಿವಕುಮಾರ್ ಕೋಸ್ಂ ಅವರು ವಂದಿಸಿದರು.