ಬೀದರ್-ಕಲಬುರಗಿ ಡೆಮು ರೈಲು ಸಮಯ ಪಾಲನೆಗೆ ಕ್ರಮ ವಹಿಸಲು ಮನವಿ
ಬೀದರ್: ಕಲಬುರಗಿ–ಬೀದರ್ ನಡುವೆ ಸಂಚರಿಸುವ ಡೆಮು ರೈಲು ನಿಗದಿತ ವೇಳಾಪಟ್ಟಿಯಂತೆ ಸಂಚರಿಸದೆ ನಿರಂತರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರೈಲು ಸಮಯ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಯುತ್ ಬ್ರಿಗೇಡ್ ವತಿಯಿಂದ ಸಂಸದ ಸಾಗರ್ ಖಂಡ್ರೆ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಸಂಸ್ಥೆಯ ಜಿಲ್ಲಾಧ್ಯಕ್ಷ ಉದಯ್ ನಾಯಕ್ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ಡೆಮು ರೈಲು ವಾರದಲ್ಲಿ ಆರು ದಿನ, ದಿನಕ್ಕೆ ನಾಲ್ಕು ಬಾರಿ ಬೀದರ್‌ನಿಂದ ಕಲಬುರಗಿಗೆ ಹಾಗೂ ನಾಲ್ಕು ಬಾರಿ ಕಲಬುರಗಿಯಿಂದ ಬೀದರ್‌ಗೆ ಸಂಚರಿಸುತ್ತಿದೆ. ಆದರೆ ನಿಗದಿತ ಸಮಯ ಪಾಲಿಸದೆ ತಡವಾಗಿ ಓಡುತ್ತಿರುವುದರಿಂದ ಕಲಬುರಗಿ ಮೂಲಕ ಇತರೆ ರೈಲುಗಳಿಗೆ ಪ್ರಯಾಣಿಸುವವರು ಸಂಪರ್ಕ ರೈಲುಗಳನ್ನು ತಪ್ಪಿಸಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಡೆಮು ರೈಲನ್ನು ಹಿಂದಿನಂತೆ ನಿಗದಿತ ವೇಳಾಪಟ್ಟಿಯಂತೆ ಸಂಚರಿಸುವಂತೆ ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಅದೇ ರೀತಿ, ಬೀದರ್–ಹೈದರಾಬಾದ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲನ್ನು ಹಿಂದಿನಂತೆ ಬೆಳಿಗ್ಗೆ 7 ಗಂಟೆಗೆ ಬೀದರ್‌ನಿಂದ ಹೊರಡುವ ವೇಳಾಪಟ್ಟಿಯನ್ನು ಮರುಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಸಂಸದರಿಗೆ ಮನವಿ ಮಾಡಲಾಗಿದೆ.