Aurad | ರಸ್ತೆ ಬದಿ ಸೇತುವೆ ಗೋಡೆ ಕುಸಿತ: ದುರಸ್ತಿಗೆ ಆಗ್ರಹ
Update: 2026-06-23 19:21 IST
ಔರಾದ್: ತಾಲೂಕಿನ ಮುಸ್ತಾಪುರ್ ಹಾಗೂ ಧೂಪತಮಗಾಂವ್ ನಡುವಿನ ರಸ್ತೆಯ ಬದಿಯಲ್ಲಿರುವ ಚಿಕ್ಕ ಸೇತುವೆಯ ಗೋಡೆ ಕುಸಿದು ಬಿದ್ದಿರುವುದರಿಂದ ವಾಹನ ಸವಾರರು, ವಿಶೇಷವಾಗಿ ರಾತ್ರಿ ವೇಳೆ ಸಂಚರಿಸುವವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ರಸ್ತೆ ಬದಿಯಲ್ಲಿರುವ ಕುಸಿದ ಭಾಗವನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪುರ್ ಆಗ್ರಹಿಸಿದ್ದಾರೆ.
ಸೇತುವೆಯ ಗೋಡೆ ಕುಸಿದ ಪರಿಣಾಮ ರಸ್ತೆ ಅಂಚು ಅಪಾಯಕಾರಿಯಾಗಿ ಮಾರ್ಪಟ್ಟಿದ್ದು, ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಕ್ಷಣವೇ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.