×
Ad

Bidar | ಬಸವತತ್ವಕ್ಕೆ ಅಪಚಾರ ಮಾಡಿದರೆ ಸಹಿಸುವುದಿಲ್ಲ: ಡಾ.ಬಸವಲಿಂಗ ಪಟ್ಟದೇವರು

ಜೂ.28ರ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ

Update: 2026-06-23 18:10 IST

ಬೀದರ್: ಬಸವ ಸಿದ್ಧಾಂತ ಹಾಗೂ ಬಸವತತ್ವ ಪ್ರಸಾರಕರ ಕುರಿತು ಕನ್ನೇರಿ ಮಠದ ಶ್ರೀಗಳು ಹಸಿಸುಳ್ಳು ಮಾತನಾಡುವ ಮೂಲಕ ಶರಣ ತತ್ವಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದೇವರು ಆರೋಪಿಸಿದರು.

ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಸೋಮವಾರ ನಡೆದ 123ನೇ ಮಾಸಿಕ ಶರಣ ಸಂಗಮ ಸಮಾರಂಭದ ದಿವ್ಯಸಾನಿಧ್ಯ ವಹಿಸಿ, ಜೂ.28ರಂದು ಬಸವಕಲ್ಯಾಣದಲ್ಲಿ ನಡೆಯಲಿರುವ ಪ್ರತಿಭಟನೆಯ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಸವಣ್ಣ ಅವರು 12ನೇ ಶತಮಾನದಲ್ಲಿ ಸಮಾನತೆಯ ಆಧಾರದ ಮೇಲೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿ, ವಚನಗಳ ಮೂಲಕ ಧರ್ಮ ಸಿದ್ಧಾಂತವನ್ನು ಬೋಧಿಸಿದರು. ಏಕದೇವೋಪಾಸನೆ, ಕಾಯಕ-ದಾಸೋಹ, ಸಮಾನತೆ, ದಯೆ, ಅಷ್ಟಾವರಣ, ಪಂಚಾಚಾರ ಹಾಗೂ ಷಟಸ್ಥಲದಂತಹ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಹೇಳಿದರು.

ಬಸವಾದಿ ಶರಣರು ನಡೆಸಿದ ಕಲ್ಯಾಣ ಕ್ರಾಂತಿ ಸಮಾನತೆಗಾಗಿ ನಡೆದ ಜಗತ್ತಿನ ಅಪರೂಪದ ಕ್ರಾಂತಿಯಾಗಿದ್ದು, ಅದನ್ನು ಪ್ರಶ್ನಿಸುವ ಮೂಲಕ ಕೆಲವರು ಶರಣರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬಸವಭಕ್ತರು ಹಾಗೂ ಬಸವತತ್ವ ಪ್ರಸಾರಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಕೆಲಸ ಕೋಲ್ಹಾಪುರದ ಕನ್ನೇರಿ ಮಠದ ಶ್ರೀಗಳು ಮಾಡುತ್ತಿರುವುದು ಖಂಡನೀಯ. ಬಸವ ಸಿದ್ಧಾಂತ ಹಾಗೂ ಬಸವತತ್ವ ಪ್ರಸಾರಕರ ಕುರಿತು ಅವರು ಹಸಿಸುಳ್ಳು ಮಾತನಾಡುವ ಮೂಲಕ ಶರಣ ತತ್ವಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

“ಹುಸಿಯ ನುಡಿಯಬೇಡ” ಎಂಬ ಬಸವಣ್ಣನವರ ವಚನವನ್ನು ಮರೆತು, ಲಿಂಗಾಯತ ಮಠಾಧೀಶರಿಗೆ ಬಸವ ತತ್ವದ ಪಾಠ ಮಾಡಲು ಅವರು ಮುಂದಾಗಿದ್ದಾರೆ ಎಂದು ಟೀಕಿಸಿದ ಅವರು, ಬಸವತತ್ವಕ್ಕೆ ಅಪಚಾರ ಮಾಡುತ್ತಿರುವ ಕನ್ನೇರಿ ಶ್ರೀಗಳ ವಿರುದ್ಧ ಜೂ.28ರಂದು ಬಸವಕಲ್ಯಾಣದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಗುರುಬಸವ ಪಟ್ಟದೇವರು, ಡಾ.ಗಂಗಾಂಬಿಕ ಅಕ್ಕ, ಪ್ರಭುದೇವ್ ಸ್ವಾಮಿ, ಬಸವಪ್ರಭು ಸ್ವಾಮಿ, ಪ್ರಭುಲಿಂಗ ಸ್ವಾಮಿ, ಸಿದ್ಧಬಸವ ಸ್ವಾಮಿ, ಶಿವಬಸವ ಸ್ವಾಮಿ, ಸುಶಿಲಾಬಾಯಿ ಉಪ್ಪಿನ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪುಣೆಯ ಸಂತೋಷ್ ಮಲಶೆಟ್ಟಿ ಅವರಿಂದ ಬಸವ‌ ಗುರುಪೂಜೆ ನೆರವೇರಿತು. ದೀಪಕ್ ಠಮಕೆ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News