Bidar | ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ
ಬೀದರ್: ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಮಂಗಳವಾರ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭವಾದ ರ‍್ಯಾಲಿ ಭಗತ್ ಸಿಂಗ್ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ತಲುಪಿತು. ರ‍್ಯಾಲಿಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಎಂಇಎಸ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಮಹಾರಾಷ್ಟ್ರ ಏಕೀಕರಣ ಸಮಿತಿ ಜೂನ್ 22ರಂದು ಬೆಳಗಾವಿ ಜಿಲ್ಲೆಯ ಕುಂದಾನಗರಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಕರ್ನಾಟಕ ಸರ್ಕಾರದ ಆದೇಶದ ಪ್ರತಿಯನ್ನು ಹರಿದು ಹಾಕಿರುವುದು ಖಂಡನೀಯ ಎಂದು ಆರೋಪಿಸಿದರು.
ಬೀದರ್, ಭಾಲ್ಕಿ, ಔರಾದ್, ಬಸವಕಲ್ಯಾಣ ಹಾಗೂ ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಕುರಿತು ಎಂಇಎಸ್ ನಿರಂತರವಾಗಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದು, ರಾಜ್ಯದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುತ್ತಿದೆ ಎಂದು ದೂರಿದರು.
ಇದಲ್ಲದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಕಲ್ಲು ತೂರಾಟ, ಚಾಲಕರು ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ ಹಲವು ಘಟನೆಗಳಲ್ಲಿ ಎಂಇಎಸ್ ಕಾರ್ಯಕರ್ತರ ಪಾತ್ರವಿದೆ ಎಂದು ಆರೋಪಿಸಿ, ಸಂಘಟನೆಯನ್ನು ರಾಜ್ಯದಲ್ಲಿ ಕಾನೂನುಬದ್ಧವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸುತ್ತಿರುವ ಎಂಇಎಸ್ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಕರ್ನಾಟಕದಲ್ಲಿ ಸಂಘಟನೆ ಮತ್ತೆ ತಲೆ ಎತ್ತದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪೀಟರ್ ಚೀಟಗುಪ್ಪಾ, ಜಿಲ್ಲಾ ಸಂಚಾಲಕ ಬಸವರಾಜ್ ನಂದಗಾಂವಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೊಕ್ರಾಣಿ, ಜಿಲ್ಲಾ ಕಾರ್ಯಾಧ್ಯಕ್ಷ ಜಗನಾಥ್ ಕೌಠಾ, ಜಿಲ್ಲಾ ಕಾರ್ಯದರ್ಶಿ ಮೋಜೆಸ್ ಆಣದುರೆ, ಜಿಲ್ಲಾ ಸಹ ಕಾರ್ಯದರ್ಶಿ ಮೈಕಲ್ ಕಡ್ಯಾಳ್, ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಅಶೋಕ್ ಕಡ್ಯಾಳ್, ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ನಾಗೇಶ್ ರಾಯಣ್ಣೋರ್, ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದ್ರಕಾಂತ್ ಪೊಳ್, ಬೀದರ್ ತಾಲೂಕಾಧ್ಯಕ್ಷ ನೀಲೇಶ್ ರಾಠೋಡ್, ಸಂತೋಷ ಜೆ., ದಿನೇಶ್ ಕಮಠಾಣಾ, ಗಿರೀಶ್ ಓಂಕಾರ್, ಪ್ರಸಾದ್ ಘೋಡಂಪಳ್ಳಿಕರ್, ಧನರಾಜ್ ಚಿಟ್ಟವಾಡಿ, ಶಿವಕುಮಾರ್ ಮಾಮುಡಗಿ, ರಾಜಗೊಂಡ ಅಣದೂರಕರ್, ಸಂಜು ಚಿಮಕೋಡ್, ಸ್ಟಿಫನ್ ಮೇತ್ರೆ, ಅಭಿಷೇಕ್ ಪಂಚಾಳ್, ಪಿಂಟು ಸಿರ್ಸಿ ಹಾಗೂ ಸುನೀಲ್ ಕುದ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.