Bhalki | ಅಂಗಡಿಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಕ್ಕೆ ಆಗ್ರಹ
ಭಾಲ್ಕಿ: ನಗರ ಸೇರಿದಂತೆ ತಾಲೂಕಿನಾದ್ಯಂತ ಎಲ್ಲ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿ ತಾಲೂಕು ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಂಗಮೇಶ ಗುಮ್ಮೆ ಅವರ ನೇತೃತ್ವದಲ್ಲಿ ಗುರುವಾರ ಸಲ್ಲಿಸಿದ ಮನವಿಯಲ್ಲಿ, ಕನ್ನಡ ಭಾಷೆ, ನೆಲ ಮತ್ತು ಜಲದ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2024ರ ಅನ್ವಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಶೇ.60ರಷ್ಟು ಹಾಗೂ ಇತರ ಭಾಷೆಗಳಿಗೆ ಶೇ.40ರಷ್ಟು ಆದ್ಯತೆ ನೀಡಬೇಕೆಂದು ಸರ್ಕಾರ ಸೂಚಿಸಿದ್ದರೂ, ತಾಲೂಕಿನಲ್ಲಿ ಈವರೆಗೆ ಕಾಯ್ದೆಯ ಸಮರ್ಪಕ ಅನುಷ್ಠಾನವಾಗಿಲ್ಲ ಎಂದು ಆರೋಪಿಸಲಾಗಿದೆ.
ಇಂಗ್ಲಿಷ್ ಭಾಷೆಗೆ ಆದ್ಯತೆ ನೀಡಿರುವ ನಾಮಫಲಕಗಳು ಎಲ್ಲೆಡೆ ರಾರಾಜಿಸುತ್ತಿವೆ. ಕನ್ನಡ ನಾಡಿನಲ್ಲಿ ಇಂಗ್ಲಿಷ್ ಭಾಷೆಗೆ ಸಿಗುತ್ತಿರುವ ಆದ್ಯತೆ ಮಾತೃಭಾಷೆಗೆ ಸಿಗುತ್ತಿಲ್ಲ. ಕನ್ನಡಿಗರು ಸ್ವಾಭಿಮಾನದ ಬದುಕು ನಡೆಸಬೇಕಿದ್ದರೂ ಇಂದಿಗೂ ಇಂಗ್ಲಿಷ್ ಆಳ್ವಿಕೆಯ ಸಂಸ್ಕೃತಿಯನ್ನು ಜೀವಂತವಾಗಿಟ್ಟುಕೊಂಡಿರುವುದು ತಲೆತಗ್ಗಿಸುವ ಸಂಗತಿಯಾಗಿದೆ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸ್ಥಳೀಯವಾಗಿ ಕನ್ನಡ ನಾಮಫಲಕ ಅಳವಡಿಸುವ ಕಾಯ್ದೆಯನ್ನು ಜಾರಿಗೊಳಿಸುವ ಜವಾಬ್ದಾರಿ ಹೊತ್ತಿರುವ ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದರಿಂದ ಇಂಗ್ಲಿಷ್ ಭಾಷೆಯ ನಾಮಫಲಕಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಕೂಡಲೇ ಸರ್ಕಾರದ ಆದೇಶವನ್ನು ಪಾಲಿಸಿ, ಶೇ.60-40ರ ಅನುಪಾತದಲ್ಲಿ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾಳಾಸ್ಕಾಂತ್ ವಾಘೆ, ಭದ್ರೇಶ್ ಸ್ವಾಮಿ, ಸಂಗಮೇಶ್ ಭೂರೆ, ಆದಿಲ್ ಸಯ್ಯದ್, ಅಂಬರೀಷ್ ಮಲ್ಲೇಶಿ, ಅಶೋಕ್ ಅಂಬಿಗಾರ್, ರಾಜಕುಮಾರ್ ಡಾವರಗಾಂವೆ, ಸತೀಶ್ ಮುಂಗಾಡೆ ಹಾಗೂ ಓಂ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.