ಬೀದರ್ ಜಿಲ್ಲೆಯಲ್ಲಿ ಆಸಿಡ್ ದಾಳಿ ಪ್ರಕರಣಗಳು ಶೂನ್ಯ: ನ್ಯಾ.ಎಸ್.ಬಿ.ರೆಹಮಾನ್
"ಆಸಿಡ್ ದಾಳಿ ನಡೆಸಲು ಪ್ರಯತ್ನಿಸಿದರೂ ಶಿಕ್ಷೆ"
ಬೀದರ್: ಜಿಲ್ಲೆಯಲ್ಲಿ ಆಸಿಡ್ ದಾಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆಸಿಡ್ ದಾಳಿಗೆ ತುತ್ತಾದ ಮಹಿಳೆ ಅಥವಾ ಯಾವುದೇ ವ್ಯಕ್ತಿ ಅನುಭವಿಸುವ ನೋವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆಸಿಡ್ ದಾಳಿ ಮಾಡಲು ಪ್ರಯತ್ನಿಸಿ ವಿಫಲರಾದರೂ ಕಾನೂನಿನಡಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ರೆಹಮಾನ್ ಹೇಳಿದರು.
ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಆಸಿಡ್ ದಾಳಿಯ ಸಂದರ್ಭಗಳನ್ನು ಎದುರಿಸುವುದು, ತಡೆಯುವುದು, ಸಂತ್ರಸ್ತರಿಗೆ ನೆರವು ನೀಡುವುದು ಹಾಗೂ ಸಂಬಂಧಿತ ಕಾಯ್ದೆಗಳ ಕುರಿತು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸ್ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೆ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಭಾರತೀಯ ದಂಡ ಸಂಹಿತೆ ಜಾರಿಯಲ್ಲಿತ್ತು. ಈಗ ಅದರ ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬಂದಿದೆ. ಇಂತಹ ಕೃತ್ಯಗಳನ್ನು ಎಸಗುವವರನ್ನು ಕಠಿಣವಾಗಿ ಶಿಕ್ಷಿಸುವ ಉದ್ದೇಶದಿಂದ ಭಾರತೀಯ ದಂಡ ಸಂಹಿತೆಯ 326(ಎ) ಕಲಂ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಮಹಿಳೆಯರಿಗೆ ಯಾವುದೇ ತೊಂದರೆಯಾದರೂ ತಕ್ಷಣ ಉಚಿತ ಪ್ರಥಮ ಚಿಕಿತ್ಸೆ ಒದಗಿಸಬೇಕು. ಮಹಿಳೆಯರ ರಕ್ಷಣೆಗಾಗಿ ಹೆಚ್ಚು ಕಾನೂನುಗಳು ಜಾರಿಗೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಉಪಾಧ್ಯ ಮಾತನಾಡಿ, ಜಿಲ್ಲೆಯಲ್ಲಿ ಆಸಿಡ್ ದಾಳಿ ಪ್ರಕರಣಗಳು ಶೂನ್ಯವಾಗಿವೆ. ಇಂತಹ ಘಟನೆಗಳು ನಡೆಯದಂತೆ ತಡೆಯಲು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವುದು ಬಹಳ ಮುಖ್ಯವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಸುರೇಖಾ ಮಾತನಾಡಿ, ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು 2.50 ಲಕ್ಷ ರೂ. ಬಡ್ಡಿರಹಿತ ಸಾಲ ಹಾಗೂ 2.50 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕಪಡೆಯ ಕಾರ್ಯಗಳನ್ನು ಪ್ರಶಂಸಿಸಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಕಿರಣ್ ಪಾಟೀಲ್ ಮಾತನಾಡಿ, ಆಸಿಡ್ ದಾಳಿಗೆ ತುತ್ತಾದ ವ್ಯಕ್ತಿ ಹಾಗೂ ಅವರ ಕುಟುಂಬದವರಿಗೆ ಆಪ್ತ ಸಮಾಲೋಚನೆ ನಡೆಸುವುದು ಅತ್ಯಂತ ಮುಖ್ಯವಾಗಿದೆ. ಸಂತ್ರಸ್ತರಿಗೆ ತಜ್ಞ ವೈದ್ಯರ ತಂಡದ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಹಾಗೂ ಜಿಲ್ಲಾ ನಿರೂಪಣಾಧಿಕಾರಿ ಶ್ರೀಕಾಂತ್ ಮೆಂಗಜಿ, ನ್ಯಾಯವಾದಿ ಬಸವರಾಜ್ ಬುಳ್ಳಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಾರದಾ ಎನ್. ಕಲ್ಮಲಕರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂಜಯ್ ಮಠಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಗೌರಿಶಂಕರ್ ಕಾರ್ಯಕ್ರಮ ನಿರೂಪಿಸಿದರು.