Bhalki | ಎಂಇಎಸ್ ನಿಷೇಧಿಸಿ, ದಿನೇಶ್ ಮುದಾಳೆಯನ್ನು ಗಡಿಪಾರು ಮಾಡಲು ಕನ್ನಡ ಸಂಘಟನೆಗಳ ಒಕ್ಕೂಟ ಆಗ್ರಹ
ಭಾಲ್ಕಿ: ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಂಘಟನೆಯನ್ನು ನಿಷೇಧಿಸುವುದರ ಜತೆಗೆ, ಕರ್ನಾಟಕ, ಕನ್ನಡ ಭಾಷೆ ಹಾಗೂ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ದಿನೇಶ್ ಮುದಾಳೆ ಸೇರಿದಂತೆ ಆತನ ಸಂಗಡಿಗರನ್ನು ಗಡಿಪಾರು ಮಾಡಬೇಕು ಎಂದು ತಾಲೂಕು ಕನ್ನಡ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಒಕ್ಕೂಟದ ಅಧ್ಯಕ್ಷ ಸಂಗಮೇಶ್ ಗುಮ್ಮೆ ಅವರ ನೇತೃತ್ವದಲ್ಲಿ ಶನಿವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ವ್ಯಕ್ತಿಗಳ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಕಾನೂನು ಉಲ್ಲಂಘನೆ ದೃಢಪಟ್ಟಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕನ್ನಡ ನೆಲದಲ್ಲಿ ಜನಿಸಿ, ಇಲ್ಲಿನ ಎಲ್ಲ ರೀತಿಯ ಸವಲತ್ತುಗಳನ್ನು ಪಡೆದುಕೊಂಡ ಕೆಲವರು ಪುಂಡಾಟಿಕೆ, ಅವಹೇಳನಕಾರಿ ಮಾತುಗಳ ಮೂಲಕ ಭಾಷೆ-ಭಾಷೆಗಳ ನಡುವೆ ವೈರತ್ವ ಬೆಳೆಸುತ್ತಿದ್ದಾರೆ. ಇಂತಹ ಚಟುವಟಿಕೆಗಳನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಲಾಗಿದೆ.
ಗಡಿ ಜಿಲ್ಲೆಗಳಾದ ಬೀದರ್ ಹಾಗೂ ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸಹೋದರರಂತೆ ಬದುಕುತ್ತಿದ್ದಾರೆ. ಆದರೆ, ದಿನೇಶ್ ಮುದಾಳೆ ಅವರಂತಹ ವ್ಯಕ್ತಿಗಳು ಕನ್ನಡದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಎರಡೂ ಭಾಷಿಕರ ನಡುವೆ ಸೌಹಾರ್ದಯುತ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ. ಕನ್ನಡಿಗರು ಮತ್ತು ಮರಾಠಿಗರು ಸೌಹಾರ್ದತೆಯಿಂದ ಬದುಕಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ದಿನೇಶ್ ಮುದಾಳೆ ಸೇರಿದಂತೆ ಇಂತಹ ಹೇಳಿಕೆಗಳನ್ನು ನೀಡುತ್ತಿರುವವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಸಂತೋಷ್ ಬಿ.ಜಿ. ಪಾಟೀಲ್, ಪ್ರಮುಖರಾದ ಮಾಳಸ್ಕಾಂತ್ ವಾಘೆ, ಸಂಗಮೇಶ್ ಭೂರೆ, ಚಂದ್ರಕಾಂತ್ ಮಲ್ಲಾರೆ, ಅಶೋಕ್ ಅಂಬಿಗರ್, ನವನಾಥ್ ಕಲವಾಡಿ, ರಾಜಕುಮಾರ್ ದುರ್ವೆ ಹಾಗೂ ವಿಷ್ಣು ದುರ್ವೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.