ಬೀದರ್ | ಸಾಮಾಜಿಕ ಭದ್ರತಾ ಪಿಂಚಣಿ ಬಿಡುಗಡೆಗೆ ಆಗ್ರಹಿಸಿ ಮನವಿ
ಬೀದರ್ : ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ, ವೃದ್ಧಾಪ್ಯ ಹಾಗೂ ಅಂಗವಿಕಲರ ಪಿಂಚಣಿಗಳನ್ನು ಕಳೆದ 4ರಿಂದ 5 ತಿಂಗಳಿಂದ ತಡೆಹಿಡಿಯಲಾಗಿದ್ದು, ಬಾಕಿ ಇರುವ ಪಿಂಚಣಿಗಳನ್ನು ತಕ್ಷಣವೇ ಬಿಡುಗಡೆಗೊಳಿಸಿ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಸಂಘಟನೆ ಆಗ್ರಹಿಸಿದೆ.
ಬೀದರ್ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಸೋಮವಾರ ಸಲ್ಲಿಸಿದ ಮನವಿ ಪತ್ರದಲ್ಲಿ, ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಆದಾಯದ ಗೊಂದಲಗಳಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಲಾಗಿದೆ.
ಸರ್ಕಾರವು ವಿವಿಧ ಹಂತಗಳಲ್ಲಿ ಆದಾಯ ಮಿತಿಯನ್ನು ಪರಿಷ್ಕರಿಸಿದ್ದರೂ, ಪ್ರಸ್ತುತ ಆನ್‌ಲೈನ್ ವ್ಯವಸ್ಥೆಯಲ್ಲಿ ಕುಟುಂಬದ ಆದಾಯ 32 ಸಾವಿರ ರೂ.ಕ್ಕಿಂತ ಕಡಿಮೆ ಇದ್ದರೆ ಮಾತ್ರ ಅರ್ಜಿಗಳು ಸ್ವೀಕರಿಸಲಾಗುತ್ತಿದೆ. ಆದರೆ, ತಹಶೀಲ್ದಾರ್ ಅವರಿಂದ ನೀಡಲಾಗುತ್ತಿರುವ ಆದಾಯ ಪ್ರಮಾಣ ಪತ್ರಗಳಲ್ಲಿ ಆದಾಯವನ್ನು 1.25 ಲಕ್ಷ ರೂ.ವರೆಗೆ ನಮೂದಿಸಲಾಗುತ್ತಿರುವುದರಿಂದ ಅನೇಕ ಫಲಾನುಭವಿಗಳ ಪಿಂಚಣಿ ರದ್ದಾಗುತ್ತಿದೆ. ಆದ್ದರಿಂದ ಅರ್ಹ ಬಡ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಲಾಗಿದೆ.
ಬೀದರ್ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಯಾವುದೇ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಬಿಡುಗಡೆಯಾಗದೆ ಇರುವುದರಿಂದ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಜೀವನ ನಿರ್ವಹಣೆಯಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಫಲಾನುಭವಿಗಳ ಬ್ಯಾಂಕ್ ಹಾಗೂ ಅಂಚೆ ಖಾತೆಗಳಿಗೆ ಪಿಂಚಣಿ ಹಣ ಸಕಾಲದಲ್ಲಿ ಜಮೆಯಾಗದೇ ಇರುವುದರಿಂದ ಅವರು ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ತಹಶೀಲ್ದಾರ್ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಸರಕಾರ ತಕ್ಷಣವೇ ಬಾಕಿ ಇರುವ ಪಿಂಚಣಿ ಹಣವನ್ನು ಬಿಡುಗಡೆ ಮಾಡಿ, ಫಲಾನುಭವಿಗಳ ಖಾತೆಗಳಿಗೆ ನಿಯಮಿತವಾಗಿ ಜಮೆಯಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಅಲ್ಲದೇ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಗಳ ಆಧಾರದ ಮೇಲೆ ಆದಾಯ ಮಿತಿಯನ್ನು ನಿಗದಿಪಡಿಸಿ, ಆದಾಯದ ಗೊಂದಲಗಳಿಂದ ರದ್ದಾಗುತ್ತಿರುವ ಪಿಂಚಣಿಗಳನ್ನು ಮರು ಸ್ಥಾಪಿಸಬೇಕು ಎಂದು ಆಗ್ರಹಿಸಲಾಗಿದೆ.
ಒಂದು ವೇಳೆ ಪಿಂಚಣಿ ಬಿಡುಗಡೆ ಹಾಗೂ ರದ್ದಾದ ಪಿಂಚಣಿಗಳ ಮರುಪರಿಶೀಲನೆ ವಿಚಾರದಲ್ಲಿ ನಿರ್ಲಕ್ಷ್ಯ ಮುಂದುವರಿದರೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದಿಲೀಪಕುಮಾರ್ ವರ್ಮಾ ಅವರು ತಿಳಿಸಿದ್ದಾರೆ. ರಾಜ್ಯ ಉಪಾಧ್ಯಕ್ಷ ಅಶೋಕ್ ಭಾವಿದೊಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಶೇಖರ್ ಶೇರಿಕಾರ್, ಭಾಲ್ಕಿ ತಾಲೂಕಾಧ್ಯಕ್ಷ ಮಹೇಂದ್ರ ಕಾಂಬಳೆ, ಶ್ರೀಕಾಂತ್ ಸಾಗರ್, ಪ್ರಧಾನ ಕಾರ್ಯದರ್ಶಿ ಪೀಟರ್ ಲಾಯನ್, ಅನೀಲಕುಮಾರ್ ಬಾಜಿ ಹಾಗೂ ಪ್ರಭು ಎಸ್. ಭಾವಿಕಟ್ಟೆ ಉಪಸ್ಥಿತರಿದ್ದರು.