Bidar | ಬೈಕ್- ಕಾರು ಢಿಕ್ಕಿ : ಮೂವರು ಮೃತ್ಯು
ಹುಲಸೂರು : ಬೈಕ್ ಹಾಗೂ ಕಾರು ಢಿಕ್ಕಿಯಾಗಿ ಬಾಲಕ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಮುಚಳಂಬ ಗ್ರಾಮದ ಸಮೀಪ ಸೋಮವಾರ ತಡರಾತ್ರಿ ನಡೆದಿದೆ.
ಬಸವಕಲ್ಯಾಣ ನಗರದ ಲಾಲ್ ತಲಾಬ್ ನಿವಾಸಿ ಬಾಬಾ (26), ಶಹಾಪುರ್ ಗಲ್ಲಿಯ ಸಮೀರ್ (22) ಹಾಗೂ ಶಾಹುಸೇನ್ ಗಲ್ಲಿಯ ರೆಹಾನ್ (12) ಮೃತಪಟ್ಟವರು.
ಮುಚಳಂಬ ಗ್ರಾಮದಲ್ಲಿ ನಡೆಯುತ್ತಿರುವ ಯಲ್ಲಾಲಿಂಗ ಮಠದ ಜಾತ್ರೆಯಲ್ಲಿ ತೊಟ್ಟಿಲು ಆಟ ಆಡಿಸಿ, ಒಂದೇ ಬೈಕ್‌ನಲ್ಲಿ ಮೂವರು ಬಸವಕಲ್ಯಾಣಕ್ಕೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ವೇಳೆ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಗಳವಾರ ಬೆಳಿಗ್ಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಪೂಜಾರಿ, ಡಿವೈಎಸ್ಪಿ ಮಾಡೋಳಪ್ಪ, ಸಿಪಿಐ ಅಮೋಲ್ ಕಾಳೆ ಹಾಗೂ ಪಿಎಸ್ಐ ಅಂಬರೀಶ್ ವಾಗ್ಮೋಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ತಿಳಿದು ಬಂದಿದೆ.
ಘಟನೆಯು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.