Bidar | 12ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ : ಟನ್ ಕಬ್ಬಿಗೆ 3,500 ರೂ. ನೀಡುವುದಾಗಿ ಡಿಸಿ ಶಿಲ್ಪಾ ಶರ್ಮಾ ಘೋಷಣೆ
ಬೀದರ್: ಜಿಲ್ಲೆಯ ರೈತರ ಕಬ್ಬಿನ ಬೆಲೆ ಸೇರಿದಂತೆ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಅಂಬೇಡ್ಕರ್ ವೃತ್ತದ ಎದುರು ನಡೆಯುತ್ತಿರುವ ಹೋರಾಟ 12ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರತಿ ಟನ್ ಕಬ್ಬಿಗೆ ಮುಂಗಡವಾಗಿ 3,400 ರೂ. ಹಾಗೂ ನಂತರದಲ್ಲಿ ಹೆಚ್ಚುವರಿಯಾಗಿ 100 ರೂ. ನೀಡುವುದಾಗಿ ಘೋಷಿಸಿದರು.
ಜಿಲ್ಲೆಯ ರೈತರು ಬರಗಾಲದ ಸಂಕಷ್ಟದಿಂದ ತತ್ತರಿಸಿದ್ದು, ಬದುಕು ದುಸ್ತರವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿ ಟನ್ ಕಬ್ಬಿಗೆ 4,500 ರೂ. ಹಾಗೂ ಕೆಲವು ಕಡೆ 4,000 ರೂ. ದರ ಘೋಷಿಸಲಾಗಿದೆ. ಬೀದರ್ ಜಿಲ್ಲೆಯೂ ಕರ್ನಾಟಕದ ಭಾಗವಾಗಿದ್ದರೂ ಇಲ್ಲಿನ ರೈತರಿಗೆ ಏಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಪ್ರಶ್ನಿಸಿ ರೈತ ಮುಖಂಡರು ಪ್ರತಿಭಟನೆ ಆರಂಭಿಸಿದ್ದರು.
ನ. 19ರಂದು ಮಂಗಲಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಗೇಟ್ ಬಂದ್ ಮಾಡುವ ಮೂಲಕ ರೈತರು ಪ್ರತಿಭಟನೆ ನಡೆಸಿದ್ದರು. ಅಂದು ಸ್ಥಳಕ್ಕೆ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿಗಳು ನ. 23ರಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.
ಈ ಭರವಸೆಯಂತೆ ಸೋಮವಾರ ಸಂಜೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ರೈತರು ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಕಬ್ಬಿನ ಬೆಲೆ ಘೋಷಿಸಿದರು. ಜಿಲ್ಲಾಧಿಕಾರಿಗಳ ಘೋಷಣೆಗೆ ಕೆಲ ಪ್ರಮುಖ ರೈತ ಮುಖಂಡರು ಒಪ್ಪಿಗೆ ಸೂಚಿಸಿದರೆ, ಇನ್ನು ಕೆಲವರು ಇದನ್ನು ಒಪ್ಪಲು ನಿರಾಕರಿಸಿದರು. ಬೆಳಗಾವಿ ಅಥವಾ ಕಲಬುರಗಿ ಮಾದರಿಯಲ್ಲಿ ಕಬ್ಬಿನ ಬೆಲೆ ಘೋಷಿಸಬೇಕು ಎಂದು ಪಟ್ಟು ಹಿಡಿದ ಅವರು, ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.