ಬೀದರ್: ಗ್ರಾಮೀಣ ಪ್ರದೇಶದ ನಿವೇಶನ ರಹಿತ ಹಾಗೂ ಮನೆ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಡೆಯುತ್ತಿರುವ ನಿವೇಶನ ಮಂಜೂರು ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಬೇಕು ಹಾಗೂ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿಯನ್ನು 3 ಲಕ್ಷ ರೂ. ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಬೀದರ್ ಜಿಲ್ಲಾ ಮಂಡಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ವಸತಿ ಸಚಿವರಿಗೆ ಮನವಿ ಸಲ್ಲಿಸಿದೆ.

ಬುಧವಾರ ಸಲ್ಲಿಸಿದ ಮನವಿಯಲ್ಲಿ, ‘ಸೂರಿಗಾಗಿ ಸಮರ’ ಕಾರ್ಯಕ್ರಮದಡಿ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ನಿವೇಶನ ರಹಿತ ಮತ್ತು ಮನೆ ರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಮತ್ತು ನಿವೇಶನ ಒದಗಿಸುವಂತೆ ಸಿಪಿಐ 2020ರಿಂದ ನಿರಂತರ ಹೋರಾಟ ನಡೆಸುತ್ತಿದೆ ಎಂದು ತಿಳಿಸಲಾಗಿದೆ.

ಸರ್ಕಾರ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಿರುವುದನ್ನು ಪಕ್ಷ ಸ್ವಾಗತಿಸಿದೆ. ಆದರೆ ಅನೇಕ ಗ್ರಾಮಗಳಲ್ಲಿ ಸರ್ಕಾರಿ ಗೌಠಾಣ ಹಾಗೂ ಗಾಯರಾಣ ಜಮೀನು ಲಭ್ಯವಿಲ್ಲದಿರುವ ಕಾರಣ ಅಗತ್ಯವಿರುವ ಕಡೆ ಭೂಸ್ವಾಧೀನ ಕಾಯ್ದೆಯಡಿ ಭೂಮಿ ಪಡೆದು ನಿವೇಶನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಸೂಕ್ತ ಸರ್ಕಾರಿ ಜಮೀನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ನಿವೇಶನ ಹಂಚಿಕೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಕಟಣೆಯಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಆದರೆ ಅಲ್ಪಾವಧಿಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿರುವುದರಿಂದ ಗ್ರಾಮೀಣ ಭಾಗದ ಅನೇಕ ಅರ್ಹ ಕುಟುಂಬಗಳಿಗೆ ಮಾಹಿತಿ ತಲುಪದೆ ಅವಕಾಶ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಬೇಕು ಎಂದು ಸಿಪಿಐ ಒತ್ತಾಯಿಸಿದೆ.

ಇದೇ ವೇಳೆ ನಿವೇಶನ ಹಾಗೂ ಇತರೆ ವಸತಿ ಯೋಜನೆಗಳ ಫಲಾನುಭವಿಗಳಿಗೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯನ್ನು ಪ್ರಸ್ತುತ 1.20 ಲಕ್ಷ ರೂ. ನಿಂದ 3 ಲಕ್ಷ ರೂ. ಗೆ ಹೆಚ್ಚಿಸಬೇಕು. ಇದರಿಂದ ಬೆಲೆ ಏರಿಕೆ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಹೆಚ್ಚಿನ ಬಡ ಕುಟುಂಬಗಳು ಸರ್ಕಾರದ ವಸತಿ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬೇಡಿಕೆಗಳನ್ನು ತಕ್ಷಣ ಪರಿಗಣಿಸಿ ಅರ್ಹ ಬಡ ಕುಟುಂಬಗಳಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಸಿಪಿಐ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಬಾಬುರಾವ ಹೊನ್ನಾ, ಎಂ.ಡಿ. ಶಫಾಯತ್ ಅಲಿ, ನಜೀರ್ ಅಹ್ಮದ್, ನನ್ನೇಸಾಬ, ಬಸವರಾಜ್, ಚಾಂದ್ ಪಾಶಾ, ತಾಹೇರ್ ಹುಸೇನ್ ಹಾಗೂ ಮೌಲಾನಾ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor