Bidar | ಅಂತ್ಯಸಂಸ್ಕಾರಕ್ಕೆ ತೆರಳಿದ್ದವರ ಮೇಲೆ ಹೆಜ್ಜೇನು ದಾಳಿ; 20ಕ್ಕೂ ಹೆಚ್ಚು ಮಂದಿಗೆ ಗಾಯ
ಹುಮನಾಬಾದ್: ತಾಲೂಕಿನ ಮಾಣಿಕನಗರ ಸಂಗಮ ಪ್ರದೇಶದಲ್ಲಿ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮಾಣಿಕನಗರ ಗ್ರಾಮದ ಮಿಶ್ರಾ ಕುಟುಂಬದ ಸದಸ್ಯರೊಬ್ಬರ ನಿಧನ ಹಿನ್ನೆಲೆಯಲ್ಲಿ ಸಂಗಮ ಪ್ರದೇಶದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು. ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಿದ ಬಳಿಕ ಹೊಗೆ ಹೆಚ್ಚಾಗುತ್ತಿದ್ದಂತೆ ಸಮೀಪದ ಜೇನುಗೂಡಿನಿಂದ ಜೇನುನೊಣಗಳ ಹಿಂಡು ಏಕಾಏಕಿ ಹೊರಬಂದು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ದಾಳಿ ನಡೆಸಿತು.
ಅನಿರೀಕ್ಷಿತ ದಾಳಿಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಜೇನುನೊಣಗಳ ಕಡಿತದಿಂದ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಬೀದರ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.