ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಚುನಾವಣೆಗೆ ಬೀದರ್ ಜಿಲ್ಲಾಡಳಿತ ಸಜ್ಜು: ಡಿಸಿ ಶಿಲ್ಪಾ ಶರ್ಮಾ
ಬೀದರ್ : ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ 2026ರ ದ್ವೈವಾರ್ಷಿಕ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಬೀದರ್ ಜಿಲ್ಲಾಡಳಿತ ಸಜ್ಜಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅರ್ಹ ಮತದಾರರ ಸಹಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 08482-221950 ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಚುನಾವಣೆಗೆ ಮತಗಟ್ಟೆ ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ಗಳ ನೇಮಕಾತಿ ಪೂರ್ಣಗೊಂಡು, ಅ.12ರಂದು ಮೊದಲನೇ ಸುತ್ತಿನ ಹಾಗೂ ಅ.17ರಂದು ಎರಡನೇ ಸುತ್ತಿನ ತರಬೇತಿ ನೀಡಲಾಗಿದೆ. ಬೀದರ್ ಜಿಲ್ಲೆಯಲ್ಲಿ ಒಟ್ಟು 33 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು (ಔರಾದ್-3, ಕಮಲನಗರ-3, ಭಾಲ್ಕಿ-6, ಬೀದರ್-8, ಹುಲಸೂರು-1, ಬಸವಕಲ್ಯಾಣ-5, ಹುಮನಾಬಾದ್-3, ಚಿಟಗುಪ್ಪ-4), ಜಿಲ್ಲೆಯಲ್ಲಿ ಒಟ್ಟು 7,038 ಅರ್ಹ ಮತದಾರರಲ್ಲಿ 3,794 ಪುರುಷರು ಮತ್ತು 3,244 ಮಹಿಳೆಯರು ಇದ್ದಾರೆ. ಮತದಾನವು ಅ.23ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮತದಾರರು ಚುನಾವಣಾ ಆಯೋಗವು ಸೂಚಿಸಿರುವ ನೆರಳು ಬಣ್ಣದ ಪೆನ್ನಿನ ಮುಖಾಂತರ ಮಾತ್ರ ಮತ ಚಲಾಯಿಸಬೇಕು. ಕ್ರಮ ಸಂಖ್ಯೆ ಬಿಟ್ಟು ಮತ ಚಲಾಯಿಸಿದರೆ ಅಥವಾ ಬೇರೆ ಬಣ್ಣದ ಪೆನ್ ಬಳಸಿದರೆ ಮತಗಳು ಅಮಾನ್ಯಗೊಳ್ಳಲಿವೆ. ಮತದಾನದ ವೇಳೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಭಾರತೀಯ ಪಾಸ್ಪೋರ್ಟ್, ಉದ್ಯೋಗ ಗುರುತಿನ ಚೀಟಿ ಅಥವಾ ವಿಶ್ವವಿದ್ಯಾನಿಲಯದ ಮೂಲ ಡಿಗ್ರಿ, ಡಿಪ್ಲೊಮಾ ಪ್ರಮಾಣಪತ್ರ ಸೇರಿದಂತೆ ಚುನಾವಣಾ ಆಯೋಗವು ಸೂಚಿಸಿರುವ ಯಾವುದಾದರೂ ಒಂದು ಗುರುತಿನ ಚೀಟಿ ತೋರಿಸಿ ಮತ ಚಲಾಯಿಸಬಹುದಾಗಿದೆ.
ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯದಲ್ಲಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. ಅ.23 ರಂದು ಜರುಗುವ ಮತದಾನಕ್ಕಾಗಿ ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ಭದ್ರತೆಗಾಗಿ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ನಿಯೋಜನೆ ಮಾಡಿಲಾಗಿದೆ. ಮತಪೆಟ್ಟಿಗೆಗಳ ಸಾಗಾಟಕ್ಕಾಗಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಈ ಚುನಾವಣೆಯ ಮುಕ್ತ ಮತ್ತು ನ್ಯಾಯಸಮ್ಮತ ನಿರ್ವಹಣೆಗಾಗಿ ಬೀದರ್ ಜಿಲ್ಲೆಯಲ್ಲಿ ಅ.21ರ ಸಂಜೆ 4ರಿಂದ ಅ.23ರ ಸಂಜೆ 6ರವರೆಗೆ ನಿಷೇಧಾಜ್ಞೆ ಹಾಗೂ ಮದ್ಯಪಾನ ನಿಷೇಧ ಘೋಷಿಸಲಾಗಿದೆ.
ಅ.22 ರಂದು ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಡಿ-ಮಸ್ಟರಿಂಗ್ ಕಾರ್ಯವು ಬೀದರ್ನ ತಹಶೀಲ್ ಕಚೇರಿಯಲ್ಲಿ ಜರುಗಲಿದೆ. ಮತ ಎಣಿಕೆ ಕಾರ್ಯವು ಗುಲಬರ್ಗಾ ವಿಶ್ವವಿದ್ಯಾನಿಲಯದ ಗಣಿತ ವಿಭಾಗದ ಕಟ್ಟಡದಲ್ಲಿರುವ ಭಾಸ್ಕರ್ ಹಾಲ್ನಲ್ಲಿ ಅ.27 ರಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.