ಬೀದರ್ | ಶಿಕ್ಷಣ ಸಂಸ್ಥೆ, ಶಿಕ್ಷಕರ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಎಫ್ಎಂಇಐ ಮನವಿ
ಬೀದರ್ : ಅನುದಾನಿತ ಶಾಲೆಗಳ ಖಾಲಿ ಹುದ್ದೆಗಳ ಭರ್ತಿ, ಅನುದಾನರಹಿತ ಸಂಸ್ಥೆಗಳಿಗೆ ಮೂಲಸೌಕರ್ಯ ಅನುದಾನ, ಖಾಸಗಿ ಶಾಲಾ ಶಿಕ್ಷಕರಿಗೆ ಆರೋಗ್ಯ ವಿಮೆ ಹಾಗೂ ವಿದ್ಯಾರ್ಥಿ ವೇತನ ಮೊತ್ತ ಹೆಚ್ಚಳ ಸೇರಿದಂತೆ ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರ ವಿವಿಧ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವಂತೆ ಫೆಡರೇಶನ್ ಆಫ್ ಮೈನಾರಿಟೀಸ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ (ಎಫ್ಎಂಇಐ) ಸರಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದ ವಿಸ್ಡ್ಂ ಕಾಲೇಜಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿದ ಸಂದರ್ಭದಲ್ಲಿ ವಿಸ್ಡ್ಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಎಫ್ಎಂಇಐ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಸಿಫುದ್ದೀನ್ ಅವರು ಪತ್ರ ಸಲ್ಲಿಸಿದರು.
ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. 10 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಮಾನ್ಯತೆ ಹೊಂದಿರುವ ಸಂಸ್ಥೆಗಳ ಮಾನ್ಯತೆ ನವೀಕರಣದ ವೇಳೆ ಅನುಮೋದಿತ ಕಟ್ಟಡ ನಕ್ಷೆ ಹಾಗೂ ಅಗ್ನಿ ಸುರಕ್ಷತಾ ನಿಯಮಗಳಲ್ಲಿ ಅಗತ್ಯ ಸಡಿಲಿಕೆ ನೀಡಬೇಕು. ಅನುದಾನರಹಿತ ಶಾಲೆಗಳಿಗೆ 2 ರಿಂದ 4 ಎಕರೆ ಜಮೀನು ಮಂಜೂರು ಮಾಡಬೇಕು. ಈಶಾನ್ಯ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುದಾನಿತ ಶಾಲಾ ಶಿಕ್ಷಕರಿಗೆ ವಸತಿ ನಿವೇಶನ ಒದಗಿಸಬೇಕು. ಸರಕಾರಿ ಶಿಕ್ಷಕರಿಗೆ ಲಭ್ಯವಿರುವ ಉಚಿತ ಆರೋಗ್ಯ ವಿಮೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರಿಗೂ ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಪುಟ್ಟಣ್ಣ ಅವರು ಇತ್ತೀಚೆಗೆ ಬೆಂಗಳೂರಿನ ಎಫ್ಎಂಇಐ ಕಚೇರಿಗೆ ಭೇಟಿ ನೀಡಿ ಚರ್ಚಿಸಿದ್ದು, ಬೆಂಗಳೂರು ಕ್ಷೇತ್ರದಲ್ಲೂ ಪುಟ್ಟಣ್ಣ ಅವರಿಗೆ ಎಫ್ಎಂಇಐ ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಶಾಸಕ ರಹೀಂ ಖಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ವಿಸ್ಡ್ಂ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಬುಶ್ರಾ ಜಮಾಲ್ ಸಾಹಿಬಾ, ಕಾರ್ಯದರ್ಶಿ ಮುಹಮ್ಮದ್ ಸಲಾಹುದ್ದೀನ್ ಫರ್ಹಾನ್, ಮಾಜಿ ಎಂಎಲ್ಸಿ ಅರವಿಂದಕುಮಾರ್ ಅರಳಿ, ಬುಡಾ ಅಧ್ಯಕ್ಷ ವಿನೋದಕುಮಾರ್ ಅಪ್ಪೆ, ಕೆಆರ್ಇ ಸೊಸೈಟಿ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಪ್ರಮುಖರಾದ ಮೊಹಮ್ಮದ್ ಶಫೀಉದ್ದೀನ್ ರೋಷನ್, ಶಾಕಿರ್ ಖಾನ್, ಎಸ್ಐಒ ಹಾಗೂ ಸಾಲಿಡಾರಿಟಿ ಯೂತ್ ಮೂವ್ಮೆಂಟ್ನ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.