×
Ad

Bidar | ಡಾ.ಚಂದ್ರಕಲಾ ಬಿದರಿ ಸಾಹಿತ್ಯ ಸೇವೆ ರಾಜ್ಯಕ್ಕೆ ಮಾದರಿ: ಸಿದ್ರಾಮಪ್ಪಾ ಮಾಸಿಮಾಡೆ

ಬದುಕು–ಬರಹ ಕುರಿತ ವಿಶೇಷ ಉಪನ್ಯಾಸ

Update: 2026-07-05 19:23 IST

ಬೀದರ್: ದಿವಂಗತ ಡಾ. ಚಂದ್ರಕಲಾ ಬಿದರಿ ಅವರು ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ ಉಪನ್ಯಾಸಕ ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿತ್ವವಾಗಿದ್ದು, ಅವರ ಸಾಹಿತ್ಯ ಸಾಧನೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಸಿದ್ರಾಮಪ್ಪಾ ಮಾಸಿಮಾಡೆ ಹೇಳಿದರು.

ನಗರದ ಕುಂಬಾರವಾಡ ರಸ್ತೆಯ ಕರುನಾಡು ಸಾಂಸ್ಕೃತಿಕ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಹಾಗೂ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ದಿ. ಡಾ. ಚಂದ್ರಕಲಾ ಬಿದರಿ ಅವರ ಬದುಕು–ಬರಹ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದುದ್ದಕ್ಕೂ ಸುಖ–ದುಃಖ, ಕಷ್ಟ–ಸವಾಲುಗಳನ್ನು ಧೈರ್ಯದಿಂದ ಎದುರಿಸಿದ ಡಾ. ಚಂದ್ರಕಲಾ ಬಿದರಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶ, ಮೌಲ್ಯಗಳು ಮತ್ತು ಸಾಹಿತ್ಯ ಪರಂಪರೆ ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿಯಾಗಲಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ. ರಾಮಚಂದ್ರ ಗಣಾಪೂರ್ ಮಾತನಾಡಿ, ಬಾಲ್ಯದಲ್ಲಿಯೇ ಅಕ್ಕಮಹಾದೇವಿ ನಾಟಕದಲ್ಲಿ ಅಭಿನಯಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದ ಚಂದ್ರಕಲಾ ಬಿದರಿ ಅವರು ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸಿ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

ಅವರ ಬದುಕು ಬಹುಮುಖ ವ್ಯಕ್ತಿತ್ವದ ಪ್ರತೀಕವಾಗಿತ್ತು. ಯೋಗ, ಪ್ರಾಣಾಯಾಮ, ಚಿತ್ರಕಲೆ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸಾಹಿತ್ಯದ ಬೆಳವಣಿಗೆಗೆ ಅನೇಕ ಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಮಾನವೀಯತೆ ಮತ್ತು ಸಾಮಾಜಿಕ ಕಾಳಜಿ ಸದಾಕಾಲ ಸ್ಮರಣೀಯವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ್ ಅತಿವಾಳೆ ಮಾತನಾಡಿ, ಡಾ. ಚಂದ್ರಕಲಾ ಬಿದರಿ ಅವರು ಅನೇಕ ಸಾಹಿತಿಗಳಿಗೆ ಮಾರ್ಗದರ್ಶನ ನೀಡಿ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸಿದ ಅಪರೂಪದ ಗುರುವಾಗಿದ್ದರು. ತಮ್ಮ ಸಾಹಿತ್ಯ ಹಾಗೂ ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಳ್ಳಲು ಅವರ ಮಾರ್ಗದರ್ಶನವೇ ಪ್ರಮುಖ ಕಾರಣವಾಗಿದ್ದು, ಅವರ ವಿಶ್ವಾಸ ಮತ್ತು ಪ್ರೋತ್ಸಾಹವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.

ಈ ವೇಳೆ ಹಿರಿಯ ಸಾಹಿತಿ ಸುನೀತಾ ಬಿರಾದಾರ್‌, ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ. ಮಕ್ತುಂಬಿ ಎಂ. ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಶಂಭುಲಿಂಗ್ ವಾಲ್ದೊಡ್ಡಿ, ರವೀಂದ್ರ ಲಂಜವಾಡಕರ್, ಓಂಕಾರ್ ಉಪ್ಪೆ, ಗೊಂಡ್ ಬಾಬುರಾವ್, ಸೂರ್ಯಕಾಂತ್ ವಿಶ್ವಕರ್ಮ ಹಾಗೂ ಆರ್.ಎಸ್. ಬಿರಾದಾರ್ ಸೇರಿದಂತೆ ಜಿಲ್ಲೆಯ ಸಾಹಿತಿಗಳು, ಪ್ರಗತಿಪರ ಚಿಂತಕರು, ಮಹಿಳೆಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಸಂತೋಷಕುಮಾರ್ ಜೋಳದಾಪಕೆ ಸ್ವಾಗತಿಸಿದರು. ಲಕ್ಷ್ಮಣ್ ಮೇತ್ರೆ ನಿರೂಪಿಸಿದರು, ಅಜೀತ್ ನೇಳಗಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News