ಹುಲಸೂರ್ | ಪತ್ರಿಕೋದ್ಯಮ ಸಮಾಜದ ಅಭಿವೃದ್ಧಿಗೆ ಪೂರಕ ಶಕ್ತಿ: ಇಒ ಮಹಾದೇವ್ ಜಮ್ಮು
ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ
ಹುಲಸೂರ್, ಜು.4: ಪತ್ರಿಕೋದ್ಯಮವು ಸಮಾಜದ ಅಭಿವೃದ್ಧಿಗೆ ಪೂರಕವಾದ ಶಕ್ತಿಯಾಗಿದ್ದು, ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ್ ಜಮ್ಮು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಕಾರ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹುಲಸೂರ್ ಘಟಕದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ಕಾರ್ಯನಿರತ ಪತ್ರಕರ್ತರ ಸನ್ಮಾನ ಹಾಗೂ ಹುಲಸೂರ್ ಮತ್ತು ಬಸವಕಲ್ಯಾಣ ತಾಲೂಕಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಷ್ಪಕ್ಷಪಾತ ಹಾಗೂ ಜವಾಬ್ದಾರಿಯುತ ವರದಿಗಾರಿಕೆ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ನಾಗರಾಜ್ ಹಾವಣ್ಣ ಮಾತನಾಡಿ, ಪತ್ರಿಕಾ ದಿನಾಚರಣೆ ಸಮಾಜಕ್ಕಾಗಿ ದುಡಿಯುವ ಪತ್ರಕರ್ತರ ಸೇವೆಯನ್ನು ಗೌರವಿಸುವ ದಿನವಾಗಿದೆ. ಸರ್ಕಾರಿ ನೌಕರರು ಮತ್ತು ಪತ್ರಕರ್ತರು ಸಮಾಜದ ಹಿತದೃಷ್ಟಿಯಿಂದ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಹುಲಸೂರ್ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಮೆಂಟೇ ಮಾತನಾಡಿ, ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮವನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ಪತ್ರಕರ್ತನ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಬಸವಕುಮಾರ್ ಕವಟೆ ಮಾತನಾಡಿ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡೂ ಸಮಾಜದ ಜಾಗೃತಿಗೆ ಪೂರಕವಾಗಿದ್ದು, ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಪತ್ರಿಕೆಗಳ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಹುಲಸೂರ್ ಹಾಗೂ ಬಸವಕಲ್ಯಾಣ ತಾಲೂಕಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬಸವಕಲ್ಯಾಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಮೂಳೆ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಹರಿನಾಥ್ ಪಾಟೀಲ್, ಖಜಾಂಚಿ ಪುಷ್ಪ ಪಾಟೀಲ್, ಉಪಾಧ್ಯಕ್ಷೆ ಶಾಲೂಬಾಯಿ ಪಾಟೀಲ್, ಖಜಾಂಚಿ ದೇವಿಂದ್ರ ಪಟ್ನೆ, ಮೀನಾಕ್ಷಿ ಬಿರಾದಾರ್, ಅನಿತಾ, ಶಕೀಲಾ ಬಾನು, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಸವಕಲ್ಯಾಣ ತಾಲೂಕು ಪ್ರಧಾನ ಕಾರ್ಯದರ್ಶಿ ಚನ್ನವೀರ್ ಶಿಂಧೆ, ಪತ್ರಕರ್ತರಾದ ನಾಗಪ್ಪ ನಿಣ್ಣೆ, ಕಲ್ಯಾಣರಾವ್ ಮದಳಗಾಂವ್ಕರ್, ಡಿ.ಕೆ. ಪ್ರಲ್ಹಾದ್, ಸತೀಶ್ ಹೊಸಮನಿ, ಸುಧಾಕರ್ ಸೂರ್ಯವಂಶಿ, ಸಂತೋಷ್ ಅಕ್ಕನ, ಜಗದೀಶ್, ವೀರಶೆಟ್ಟಿ ಕರಕಲ್ಲೆ, ಅಶೋಕ್ ಪಾಟೀಲ್, ದತ್ತಾತ್ರೇಯ ಸ್ವಾಮಿ ಹಾಗೂ ದತ್ತಾತ್ರೇಯ ಸಾಬನೆ ಸೇರಿದಂತೆ ಸರ್ಕಾರಿ ನೌಕರರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು. ಸರ್ಕಾರಿ ನೌಕರರ ಸಂಘದ ಪರಿಷತ್ ಸದಸ್ಯ ಭೀಮಾಶಂಕರ್ ಅದೆಪ್ಪಾ ನಿರೂಪಿಸಿದರು. ಶಿಕ್ಷಕ ರಾಜಕುಮಾರ್ ಮೆಹಕರೆ ಸ್ವಾಗತಿಸಿದರು. ಪ್ರೌಢಶಾಲಾ ಶಿಕ್ಷಕ ದೇವಿಂದ್ರ ನಂಜವಾಡೆ ವಂದಿಸಿದರು.