ಔರಾದ್: ವಿದ್ಯಾರ್ಥಿಯೊಬ್ಬರ ಮೇಲೆ ಬಸ್ ನಿರ್ವಾಹಕ ಹಲ್ಲೆ ನಡೆಸಿದ ಘಟನೆ ಖಂಡಿಸಿ ಹಾಗೂ ಔರಾದ್ ತಾಲೂಕಿನ ವಿವಿಧ ಗ್ರಾಮಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಬುಧವಾರ ಔರಾದ್ ಬಸ್ ನಿಲ್ದಾಣದ ಎದುರು ಬಸ್ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಬಸ್ ಸಿಬ್ಬಂದಿಯಿಂದ ವಿದ್ಯಾರ್ಥಿಗಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಯಬಾರದು. ವಿದ್ಯಾರ್ಥಿಗಳೊಂದಿಗೆ ಗೌರವಯುತವಾಗಿ ವರ್ತಿಸಬೇಕು. ಹಲ್ಲೆ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಔರಾದ್ ತಾಲೂಕಿನ ವಿವಿಧ ಗ್ರಾಮಗಳಿಗೆ ಸಮರ್ಪಕ ಹಾಗೂ ನಿಯಮಿತ ಬಸ್ ಸೌಲಭ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಔರಾದ್–ಬೀದರ್ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೆಚ್ಚುವರಿ ಬಸ್‌ಗಳನ್ನು ಸಂಚರಿಸಬೇಕು. ಗ್ರಾಮೀಣ ಪ್ರದೇಶಗಳಿಗೆ ಅಗತ್ಯಕ್ಕೆ ಅನುಗುಣವಾಗಿ ನಿಯಮಿತ ಬಸ್ ಸೇವೆ ಒದಗಿಸುವಂತೆ ಸಾರಿಗೆ ಇಲಾಖೆಯನ್ನು ಆಗ್ರಹಿಸಿದರು.

ಬಸ್ ಕೊರತೆಯಿಂದ ದೂರದ ಗ್ರಾಮಗಳಿಂದ ಔರಾದ್ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜುಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದರು.

ಪ್ರತಿಭಟನೆಯ ಬಳಿಕ ಜಿಲ್ಲಾ ಸಂಚಾರಿ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಾರಿಗೆ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗ ಸಂಚಾಲಕ ಪವನ್ ಕುಂಬಾರ್, ಜಿಲ್ಲಾ ಸಂಚಾಲಕ ನಾಗರಾಜ್ ಸುಲ್ತಾನಪುರೆ, ಸುರೇಶ್ ಮಾರ್ಥುಲೆ, ಪವನ್ ಪಾಂಚಳ್, ಮಹೇಶ್, ಮಾರುತಿ, ಸಂತೋಷ್, ಅಭಿಷೇಕ್ ಪಾಟೀಲ್, ಸಿದ್ದು ನಾಗರಾಳೆ,ಉಮಾಕಾಂತ್ ಕುರುಳ್ಳೆ, ಅಲ್ಕಾ, ಅಂಬಿಕಾ, ಭಾಗ್ಯಲತಾ, ಹಾವಪ್ಪಾ ದ್ಯಾಡೆ, ಅಶೋಕ್ ಶೇಂಬೆಳ್ಳಿ ಹಾಗೂ ಅಂಬಾದಾಸ್ ನಳಗೆ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor